ಮೂಡುಬಿದಿರೆ,ಜ 16(MSP): ಶಿರ್ತಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿರುವ ಪಡುಕೊಣಾಜೆಯ ಕಿನ್ಯಾಲಬರಿ ಎಂಬಲ್ಲಿ ಯುವಕನೋರ್ವ ರಾತ್ರಿ ಮಲಗಿದ್ದಲ್ಲೇ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.
ಕೆಂಚರ್ಲಗುಡ್ಡೆ ಬಳಿಯ ಕಿನ್ಯಾಲಬರಿಯ ನಿವಾಸಿ ದಿ.ಪರ್ದೇಶಿ ಮೇರಾ ಅವರ ಪುತ್ರ ಶೇಖರ (೩೫ವ) ಸಾವನ್ನಪ್ಪಿದ ವ್ಯಕ್ತಿ. ಶೇಖರ್ ಅವರು ತನ್ನ ಮನೆ ಬಳಿಯಲ್ಲೇ ಇರುವ ಅಕ್ಕ ಸುಶೀಲ ಮತ್ತು ತಂಗಿ ವಾಸಿಸುತ್ತಿರುವ ತಮ್ಮ ಮೂಲ ಮನೆಯಲ್ಲಿ ಪ್ರತಿದಿನ ರಾತ್ರಿ ಮಲಗುತ್ತಿದ್ದರು. ಶೇಖರ್ ಅವರು ಸೋಮವಾರ ರಾತ್ರಿ ಅಮಲು ಪದಾರ್ಥವನ್ನು ಸೇವಿಸಿ ಮಲಗಲು ಬಂದಿದ್ದು ಈ ಸಂದರ್ಭ ಸುಶೀಲ ಅವರು ಊಟ ಮಾಡುವಂತೆ ಒತ್ತಾಯಿಸಿದ್ದಾರೆ. ಆಗ ಊಟ ಬೇಡವೆಂದು ಹೇಳಿದ್ದು ನಂತರ ಗಂಜಿ ತೆಲಿಯನ್ನು ಸೇವಿಸಿ ಮಲಗಿದ್ದರು. ನಂತರ ಮಧ್ಯರಾತ್ರಿಗೆ ಎಚ್ಚೆತ್ತ ಶೇಖರ್ ಅವರು ನೀರು ಬೇಕೆಂದು ಕೇಳಿದ್ದು ಅಕ್ಕ ನೀರು ತಂದು ಕೊಟ್ಟಿದ್ದಾರೆ. ನೀರು ಕುಡಿದು ಮಲಗಿದ ಆತನನ್ನು ಅಕ್ಕ ಮುಂಜಾನೆ 4 ಗಂಟೆ ವೇಳೆಗೆ ಎದ್ದು ನೋಡಿದ್ದಾಗ ಸಾವನ್ನಪ್ಪಿರುವ ಬಗ್ಗೆ ತಿಳಿದು ಬಂದಿದೆ.
ಈ ಬಗ್ಗೆ ಸುಶೀಲ ಅವರು ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು "ಈತನ ಮರಣ ಹೇಗೆ ಸಂಭವಿಸಿತ್ತು ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ದೇಹವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಮಹಜರು ಮಾಡಿಸಿದ್ದಾರೆ. ಫೋರೆನ್ಸಿಕ್ ವರದಿಗಾಗಿ ಕಾಯುತ್ತಿದ್ದಾರೆ.