ಪುತ್ತೂರು, ಜೂ 20 (DaijiworldNews/MS): ರಾಜ್ಯ ಕಾಂಗ್ರೆಸ್ʼನ ಐಟಿ ಸೆಲ್ ಕಾಯದರ್ಶಿ ಹಾಗೂ ಮಹಿಳಾ ಕಾಂಗ್ರೆಸ್ ನ ರಾಜ್ಯ ಪ್ರಧಾನ ಕಾಯದರ್ಶಿಯಾಗಿರುವ ಪುತ್ತೂರಿನ ನ್ಯಾಯವಾದಿ ಶೈಲಜಾ ಅಮರನಾಥ, ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದು," ಯೂಟ್ಯೂಬ್ ಚಾನೆಲ್ವೊಂದು ರಾಮ ದೇವರ ವಿಚಾರದಲ್ಲಿ ಆಡಿಯೋ ಮತ್ತು ವೀಡಿಯೋ ಎಡಿಟ್ ಮಾಡಿ ನನ್ನ ಫೋನ್ ನಂಬರ್ ಹಾಗೂ ಭಾವಚಿತ್ರ ಬಳಸಿ ತಪ್ಪು ಸಂದೇಶ ರವಾನೆ ಮಾಡಿರುವ ಕಾರಣದಿಂದ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಈ ಕುರಿತು ಯೂಟ್ಯೂಬ್ ಚಾನೆಲ್ ಮತ್ತು ಅದರ ನಿರೂಪಕಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಜೂ. 17ರಂದು ತಪ್ಪು ಸಂದೇಶ ರವಾನೆ ಮಾಡಲಾಗಿದ್ದು ಈ ಕಾರಣದಿಂದ ನನಗೆ ಜೀವ ಬೆದರಿಕೆ ಕರೆಗಳು ಬರುತ್ತಿರುವುದಲ್ಲದೇ ಮನೆಗೆ ಕಲ್ಲು ಎಸೆದು ಕಿಟಕಿ ಗಾಜು ಪುಡಿ ಮಾಡಿ ಮಡ್ ಆಯಿಲ್ ಚೆಲ್ಲಿ ಸುಮಾರು ೩೦ ಸಾವಿರದಷ್ಟು ನಷ್ಟ ಉಂಟುಮಾಡಿದ್ದಾರೆ. ಕಚೇರಿಯಲ್ಲಿ ಶ್ರದ್ಧಾಂಜಲಿ ಫೋಟೋ ಹಾಕಿ ಮಾನಹಾನಿ ಮಾಡಿದ್ದಾರೆ. ಈ ಕೃತ್ಯಕ್ಕೆ ಕಾರಣವಾದ ವಿಕ್ರಮ್ ಯೂಟ್ಯೂಬ್ ಚಾನೆಲ್ನ ನಿರೂಪಕಿ ಎಂ. ಎಸ್. ಮುಮ್ತಾಸ್ ಹಾಗೂ ಚಾನೆಲ್ ಮೇಲೆ ಕ್ರಮ ಕೈಗೊಳ್ಳಬೇಕಾಗಿ ದೂರಿನಲ್ಲಿ ಆಗ್ರಹಿಸಲಾಗಿದೆ