ಮಂಗಳೂರು, ಜ 16(SM): ಹಿರಿಯ ಯಕ್ಷಗಾನ ಕಲಾವಿದ ದಿವಂಗತ ಪುಳಿಂಚ ರಾಮಯ್ಯ ಶೆಟ್ಟಿ ಸ್ಮರಣಾರ್ಥ ಸ್ಥಾಪಿಸಲ್ಪಟ್ಟ ಪುಳಿಂಚ ಸೇವಾಪ್ರತಿಷ್ಠಾನದ ವತಿಯಿಂದ ಪುಳಿಂಚ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಬಂಟ್ವಾಳದ ಬಾಳ್ತಿಲ ಕಶೆಕೋಡಿ ವೆಂಕಟರಮಣ ದೇವಸ್ಥಾನದ ಬಳಿಯ ಚೆಂಡೆ ಶ್ರೀ ಕಾರಣಿಕ ಕಲ್ಲುರ್ಟಿ ದೈವಸ್ಥಾನದ ಬಯಲು ರಂಗಮಂದಿರದಲ್ಲಿ ಜರುಗಿತು.
ಹಿರಿಯ ಸ್ತ್ರೀವೇಷಧಾರಿ ಪುಂಡರೀಕಾಕ್ಷ ಉಪಾಧ್ಯಾಯ, ಪ್ರಸಿದ್ಧ ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಮತ್ತು ಯಕ್ಷಗಾನ ಭಾಗವತ ದಿನೇಶ್ ಅಮ್ಮಣ್ಣಾಯ ಅವರಿಗೆ ಬಿರುದು ಸಹಿತ ಪುಳಿಂಚ ಪ್ರಶಸ್ತಿಯನ್ನು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಯಕ್ಷಗಾನ ಹಾಸ್ಯಗಾರ ಸೀತಾರಾಮ ಕಟೀಲ್ ಅವರನ್ನು ಅಭಿನಂದಿಸಲಾಯಿತು. ಪಂಚಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಕಡಬ, ಕೋಡಪದವು, ಬಂಗಾಡಿಯವರ ಯಕ್ಷಗಾನ ಹಾಸ್ಯ ವೈಭವ, ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.