ಉಡುಪಿ, ಜೂ 19 (DaijiworldNews/SM): ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಪಠ್ಯಪುಸ್ತಕ ಹರಿದ ಡಿಕೆಶಿ ನಡೆಯನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಖಂಡಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರ ಯೋಚನೆ ಮಾಡಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದೆ. ಟೀಕೆ ಟಿಪ್ಪಣಿ ಎಲ್ಲದಕ್ಕೂ ಸರ್ಕಾರ ಹಾಗೂ ನಾವೆಲ್ಲ ಉತ್ತರ ಕೊಡುತ್ತಿದ್ದೇವೆ. ರಾಷ್ಟ್ರೀಯ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಡಿಕೆಶಿ ಅವರು ಸಾರ್ವಜನಿಕವಾಗಿ ಪುಸ್ತಕ ಹರಿದಾಕುವ ಮಟ್ಟಕ್ಕೆ ಇಳಿದಿರುವುದು ಆತಂಕ ಉಂಟುಮಾಡಿದೆ. ಡಿಕೆಶಿಯವರು ತಮ್ಮ ವರ್ತನೆ ಬಗ್ಗೆ ಆಲೋಚನೆ ಮಾಡಬೇಕು. ಪುಸ್ತಕ ಹರಿದು ಹಾಕಿದ ವರ್ತನೆಗೆ ವಿಷಾದ ವ್ಯಕ್ತಪಡಿಸಬೇಕು.
ಪ್ರತಿರೋಧಕ್ಕೆ ಸದನದ ಒಳಗೆ ಹಾಗೂ ಹೊರಗೆ ಅವಕಾಶ ಇದೆ. ಹೀಗೆ ಸಾರ್ವಜನಿಕವಾಗಿ ಪುಸ್ತಕ ಹರಿದಾಕಿರುವುದು ಖಂಡನೀಯ. ಡಿಕೆಶಿ ಅವರ ಹುದ್ದೆಗೆ ಈ ವರ್ತನ ತಕ್ಕದಲ್ಲ ಎಂದು ಉಡುಪಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ.