ಕುಂದಾಪುರ, ಜೂ 19 (DaijiworldNews/HR): ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಎಂಟು ವರ್ಷಗಳ ಯಶಸ್ವಿ ಆಡಳಿತವನ್ನು ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾ ಕುಂದಾಪುರದ ವತಿಯಿಂದ 'ವಿಕಾಸ ತೀರ್ಥ ಬೃಹತ್ ಬೈಕ್ ರ್ಯಾಲಿ' ಭಾನುವಾರ ನಡೆಯಿತು.
ರ್ಯಾಲಿಗೆ ಚಾಲನೆ ನೀಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪ್ರಧಾನಿ ನರೆಂದ್ರ ಮೋದಿ ಸರಕಾರದ ಜನಪರ ಆಡಳಿತವನ್ನು ಸಹಿಸಲಾಗದೇ ವಿಪಕ್ಷಗಳು ಟೀಕೆ ಮಾಡುತ್ತಿವೆ. ಒಂದು ರಾಜಕೀಯ ಪಕ್ಷವಾಗಿ ಸಮರ್ಥ ಆಡಳಿತ ವ್ಯವಸ್ಥೆಯೊಂದಿಗೆ ಸಾಮಾನ್ಯ ಜನರಿಗೆ ಆಡಳಿತದ ಒಟ್ಟು ಮಾಹಿತಿಯನ್ನು ಕೊಡುವಂತಹ ಈ ವಿಕಾಸ ತೀರ್ಥ ಯಾತ್ರೆ ಅತ್ಯಂತ ಪರಿಣಾಮಕಾರಿಯಾಗಿ ಮುನ್ನಡೆಯಲಿ. ಅಭಿವೃದ್ಧಿ ಹಾಗೂ ದೇಶ ರಕ್ಷಣೆಯಲ್ಲಿ ತೋರಿದ ಉತ್ಸಾಹ, ಆಡಳಿತಾತ್ಮಕ ವ್ಯವಸ್ಥೆಯಲ್ಲಿ ತಂದಿರುವ ಅನೇಕ ಸುಧಾರಣೆಗಳು ಜನರಿಗೆ ಖುಷಿ ನೀಡಿದೆ ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ, ಬಿಜೆಪಿ ಜಿಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕುಂದಾಪುರ ಮಂಡಲ ಪ್ರಭಾರಿ ಬಕಾಡಿ ಸುಪ್ರಸಾದ್ ಶೆಟ್ಟಿ, ದ.ಕ. ಜಿಲ್ಲಾ ಬಿಜೆಪಿ ಸಹ ಪ್ರಭಾರಿ ರಾಜೇಶ್ ಕಾವೇರಿ, ಕುಂದಾಪುರ ಮಂಡಲದ ಅಧ್ಯಕ್ಷ ಶಂಕರ ಅಂಕದಕಟ್ಟೆ, ಯುವಮೋರ್ಚಾ ಅಧ್ಯಕ್ಷ ಅವಿನಾಶ್ ಉಳ್ತೂರು, ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಉಪಾಧ್ಯಕ್ಷ ಸಂದೀಪ್ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಜಿ.ಕೆ., ಸದಸ್ಯರು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಜಯ ಎಸ್. ಪೂಜಾರಿ, ವಿವಿಧ ಮೋರ್ಚಾಗಳ ಪ್ರಮುಖರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿಯಿಂದ ಆರಂಭಗೊಂಡ ಬೈಕ್ ರ್ಯಾಲಿಯು ಬಸ್ರೂರು ಮೂರುಕೈ ಜಂಕ್ಷನ್ ಮೂಲಕವಾಗಿ, ಹೆದ್ದಾರಿಯಿಂದ ಸಾಗಿ ಕೋಟೇಶ್ವರ, ಬೀಜಾಡಿಯವರೆಗೆ ಸಾಗಿ, ಮತ್ತೆ ಕುಂದಾಪುರ ನಗರದಲ್ಲಿ ಸಮಾಪನಗೊಂಡಿತು. ರ್ಯಾಲಿಯಲ್ಲಿ ನೂರಾರು ಮಂದಿ ನಾಯಕರು, ಕಾರ್ಯಕರ್ತರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.