ಉಡುಪಿ, ಜೂ 19 (DaijiworldNews/HR): ಉಡುಪಿಯಿಂದ ಗುಂಡಿಬೈಲು ಮುಖಾಂತರವಾಗಿ ಅಂಬಾಗಿಲು ಸಂಪರ್ಕಿಸುವ ರಸ್ತೆ ಇದೀಗ ಮತ್ತೆ ಸಮಸ್ಯೆಯ ತಾಣವಾಗಿ ಬದಲಾಗಿದೆ. ಕಳೆದ ಸುಮಾರು ಮೂರು ತಿಂಗಳ ಹಿಂದೆ ಈ ಭಾಗದಲ್ಲಿ ಆರಂಭವಾಗಿದ್ದ ಒಳಚರಂಡಿ ಕಾಮಗಾರಿಯು ಇದೀಗ ಮುಕ್ತಾಯದತ್ತ ಸಾಗುತಿದ್ದರೂ ಕೂಡಾ ಅಪೂರ್ಣ ಕಾಮಗಾರಿ ಮತ್ತು ಹೊಂಡ ಗುಂಡಿಗಳಿಂದ ಕೂಡಿದ ರಸ್ತೆಯಿಂದಾಗಿ ವಾಹನ ಸವಾರರು ತೀವ್ರ ಕಷ್ಟ ಪಡುತ್ತಿದ್ದಾರೆ.
ಇಲ್ಲಿನ ಮೆಹಾನ್ ಕಾಂಪ್ಲೆಕ್ಸ್ ಎದುರು ಭಾಗದಲ್ಲಿ ಇರುವ ರಸ್ತೆಯ ಒಂದು ಭಾಗದಲ್ಲಿ ಕಾಮಗಾರಿಗಾಗಿ ಹೊಂಡವನ್ನು ತೆಗೆಯಲಾಗಿತ್ತು. ಕಾಮಗಾರಿ ಮುಗಿದು ಕೆಲವೊಂದು ದಿನಗಳು ಕಳೆದರೂ ಕೂಡಾ ಇನ್ನೂ ಕೂಡಾ ಹೊಂಡವನ್ನು ವ್ಯವಸ್ಥಿತವಾದ ರೀತಿಯಲ್ಲಿ ಮುಚ್ಚಿಲ್ಲ,. ಕೇವಲ ಮಣ್ಣನ್ನು ತುಂಬಿಸಿ ಇಡಲಾಗಿದ್ದು ಅಪಾಯದ ಸೂಚನೆ ಎಂಬಂತೆ ಬ್ಯಾರಿಕೇಡ್ ಅನ್ನು ಬೇರೆ ಇಡಲಾಗಿದೆ. ಇದೇ ಭಾಗದಲ್ಲಿ ವಾರಾಹಿ ನೀರಿನ ಪೂರೈಕೆಗಾಗಿ ರಸ್ತೆಯನ್ನು ಅಗೆದು ಪೈಪ್ ಲೈನ್ ಅನ್ನು ಹಾಕಲಾಗಿತ್ತು, ಇದನ್ನು ಕೂಡಾ ಗುತ್ತಿಗೆದಾರರು ಅರ್ಧದಲ್ಲಿಯೇ ಮುಗಿಸಿ ಕೈ ಚೆಲ್ಲಿದ್ದಾರೆ. ಪೈಪ್ ಲೈ್ನ್ ಕಾಮಗಾರಿ ನಡೆಸಿದ ಕಡೆ ಕೇವಲ ಸಿಮೆಂಟ್ ನ ಒಂದು ಬೆಡ್ ಮಾತ್ರ ಹಾಕಲಾಗಿದ್ದು ಡಾಮಾರ್ ಹಾಕದೇ ಇರುವುದರಿಂದ ವಾಹನ ಸವಾರರಯ, ಪಾದಚಾರಿಗಳಿಗೆ ನಿತ್ಯ ಸಂಚಾರಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ.
ರಸ್ತೆಯ ಎರಡೂ ಪಾರ್ಶ್ವದಲ್ಲಿ ವಿವಿದ ಕಾಮಗಾರಿಗಳಿಗಾಗಿ ನಡೆಸಿದ ಅಗೆತ ಮತ್ತು ಹೊಂಡಗಳಿಂದಾಗಿ ಸಂಪೂರ್ಣ ರಸ್ತೆಯೇ ಹಾಳಾಗಿದ್ದು ವಾಹನ ಸವಾರರು ಸರ್ಕಸ್ ನಡೆಸುತ್ತಲೇ ವಾಹನ ಚಲಾಯಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಒಟ್ಟಿನಲ್ಲಿ ಉಡುಪಿ-ಗುಂಡಿಬೈಲು-ಅಂಬಾಗಿಲು ರಸ್ತೆಯು ಉಡುಪಿ ನಗರದ ನತದೃಷ್ಟ ರಸ್ತೆಗಳಲ್ಲಿ ಒಂದು. ಈ ರಸ್ತೆಯಲ್ಲಿ ಪ್ರತಿದಿನ ನೂರಾರು ಮಂದಿ ವಾಹನ ಸವಾರರು ಸಂಚಾರ ನಡೆಸಿತಿದ್ದು ಉಡುಪಿ ನಗರ ಮತ್ತು ರಾಷ್ಟ್ರೀಯ ಹೆದ್ದಾರಿ 66 ನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಕೂಡಾ ಇದಾಗಿದೆ. ಮಳೆಗಾಲದ ಸಮಯದಲ್ಲಿ ಸಂಭವಿಸಬಹುದಾದ ಹೆಚ್ಚಿನ ಅಪಾಯವನ್ನು ತಪ್ಪಿಸಿ ತಕ್ಷಣವೇ ಸಂಬಂಧಪಟ್ಟ ಇಲಾಖೆಗಳು ಕಾರ್ಯಪ್ರವತ್ತರಾಗಿ ರಸ್ತೆಯನ್ನು ಸುಸ್ಥಿತಿಗೆ ತರಬೇಕಾಗಿದೆ.