ಮಂಗಳೂರು, ಜೂ 19 (DaijiworldNews/DB): ಮುಂಬೈ-ಮಂಗಳೂರು-ಮುಂಬೈ ಸೆಕ್ಟರ್ ನಡುವೆ ದೈನಂದಿನ ವಿಮಾನ ಹಾರಾಟವನ್ನು ಇಂಡಿಗೋ ಭಾನುವಾರದಿಂದ ಆರಂಭಿಸಿದೆ. ಇಂಡಿಗೋದ ನೂತನ 6E 5236/6E 5237 ವಿಮಾನ ಇನ್ನು ಪ್ರತಿದಿನ ಮಂಗಳೂರು-ಮುಂಬೈ ನಡುವೆ ಹಾರಾಟ ನಡೆಸಲಿದೆ.
6E 5236 ವಿಮಾನವು ಮುಂಬೈಯಿಂದ ಬೆಳಗ್ಗೆ 8.50ಕ್ಕೆ ಹೊರಟು, ಬೆಳಗ್ಗೆ10.20ಕ್ಕೆ ಮಂಗಳೂರು ತಲುಪಲಿದೆ. 6E 5237 ವಿಮಾನವು ಬೆಳಗ್ಗೆ 11 ಗಂಟೆಗೆ ಮಂಗಳೂರಿನಿಂದ ಹೊರಟು ಮಧ್ಯಾಹ್ನ12.40ಕ್ಕೆ ಮುಂಬೈ ತಲುಪಲಿದೆ. ಈ ಹೊಸ ವಿಮಾನದಲ್ಲಿ ಏರ್ಬಸ್ A320 ಮಾದರಿಯನ್ನು ಈ ವಿಮಾನದಲ್ಲಿ ಬಳಸಿದೆ.
ಶುಕ್ರವಾರ ಇದರ ಪ್ರಾಯೋಗಿಕ ಕಾರ್ಯಾಚರಣೆ ನಡೆಸಲಾಗಿತ್ತು. ಅಂದು 6E 5236 ವಿಮಾನದಲ್ಲಿ ಎರಡು ಶಿಶುಗಳು ಸೇರಿ 88 ಮಂದಿ ಮಂಗಳೂರಿಗೆ ಹಾಗೂ 6E 5237 ವಿಮಾನದಲ್ಲಿ 99 ಮಂದಿ ಪ್ರಯಾಣಿಕರು ಮುಂಬೈಗೆ ಪ್ರಯಾಣಿಸಿದ್ದರು. ಅಧಿಕೃತ ಹಾರಾಟ ಆರಂಭವಾದ ಭಾನುವಾರದಂದು 6E 5236 ವಿಮಾನದಲ್ಲಿ 55 ಮಂದಿ ಪ್ರಯಾಣಿಕರು ಮುಂಬೈಯಿಂದ ಮಂಗಳೂರಿಗೆ ಬಂದಿಳಿದರು. 6E 5237 ವಿಮಾನದಲ್ಲಿ ಒಂದು ಶಿಶು ಸೇರಿದಂತೆ 143 ಮಂದಿ ಪ್ರಯಾಣಿಕರು ಮುಂಬೈಗೆ ಪ್ರಯಾಣ ಬೆಳೆಸಿದ್ದರು.
ಈ ತಿಂಗಳಾರಂಭದಿಂದ ಇಂಡಿಗೋ ತನ್ನ ಮಧ್ಯಾಹ್ನದ ಬಳಿಕದ 6E 6348/6E 6349 ವಿಮಾನಯಾನದ ಸೇವೆಯನ್ನು ಹಿಂತೆಗೆದುಕೊಂಡಿತ್ತು.
ಪ್ರಸ್ತುತ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 108 ಡೊಮೆಸ್ಟಿಕ್ ವಿಮಾನಗಳು ಹಾರಾಟ ನಡೆಸುತ್ತಿದ್ದು, ಈ ಪೈಕಿ 85 ವಿಮಾನಗಳು ಇಂಡಿಗೋ ಸಂಸ್ಥೆಗೆ ಸೇರಿದ್ದವಾಗಿವೆ. ಇದರಲ್ಲಿ ಬೆಂಗಳೂರಿಗೆ 28, ದೆಹಲಿ ಮೂಲಕ ಪುಣೆಗೆ 4, ಚೆನ್ನೈಗೆ 7, ಮುಂಬೈಗೆ 21, ಹೈದರಾಬಾದ್ಗೆ 14, ಕಲ್ಕತ್ತಾ ಮಾರ್ಗವಾಗಿ ಬೆಂಗಳೂರಿಗೆ 7 ಹಾಗೂ ಹುಬ್ಬಳ್ಳಿಗೆ 4 ವಿಮಾನಗಳು ಹಾರಾಟ ನಡೆಸುತ್ತಿವೆ. ಇದಲ್ಲದೆ ಏರ್ ಇಂಡಿಯಾದ 7 (ಮುಂಬೈ), ಸ್ಪೈಸ್ಜೆಟ್ನ 6 (ಬೆಂಗಳೂರು); ಗೋಫಾಸ್ಟ್ನ 7 (ಮುಂಬೈ) ಹಾಗೂ ಏರ್ ಇಂಡಿಯಾ ಎಕ್ಸ್ಪ್ರೆಸ್ನ 3 (ಮುಂಬೈ) ವಿಮಾನಗಳು ಹಾರಾಟ ನಡೆಸುತ್ತಿವೆ.
ಹುಬ್ಬಳ್ಳಿ-ಮಂಗಳೂರು ವಿಮಾನ ಸಮಯ ಬದಲು
ಹುಬ್ಬಳ್ಳಿ-ಮಂಗಳೂರು ನಡುವೆ ಭಾನುವಾರ, ಸೋಮವಾರ, ಮಂಗಳವಾರ ಮತ್ತು ಶುಕ್ರವಾರದಂದು ಇದ್ದ ಇಂಡಿಗೋ ವಿಮಾನಗಳ ಹಾರಾಟದ ಸಮಯ ಪ್ರಸ್ತುತ ಬದಲಾಗಿದೆ. ಈ ಮೊದಲು 6E7189 (ಎಟಿಆರ್) ವಿಮಾನ ಮಂಗಳೂರಿಗೆ ಸಂಜೆ 6.05ಕ್ಕೆ ಆಗಮಿಸಿ 6.35ಕ್ಕೆ ಹೊರಡುತ್ತಿತ್ತು. ಬದಲಾದ ಸಮಯದಲ್ಲಿ ಈ ವಿಮಾನವು ಹುಬ್ಬಳ್ಳಿಯಿಂದ ಸಂಜೆ 7ಕ್ಕೆ ಹೊರಟು ಮಂಗಳೂರಿಗೆ ರಾತ್ರಿ 8 ಗಂಟೆಗೆ ಆಗಮಿಸಲಿದೆ. ಬಳಿಕ ರಾತ್ರಿ 8.20ಕ್ಕೆ ಮಂಗಳೂರಿನಿಂದ ಹೊರಟು ರಾತ್ರಿ 9.35ಕ್ಕೆ ಹುಬ್ಬಳ್ಳಿ ತಲುಪಲಿದೆ. ಬಳಿಕ ಅದೇ ವಿಮಾನವು ಬೇರೆ ಸಂಖ್ಯೆಯೊಂದಿಗೆ ರಾತ್ರಿ 10 ಗಂಟೆಗೆ ಬೆಂಗಳೂರಿಗೆ ಹೊರಡಲಿದೆ.