ಕುಂದಾಪುರ, ಜೂ 19 (DaijiworldNews/DB): ಕೋಟದ ಕೊರಗ ಕಾಲನಿಯಲ್ಲಿ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ನಡೆದ ಪೊಲೀಸ್ ದೌರ್ಜನ್ಯ ಪ್ರಕರಣದಲ್ಲಿ ಹಲ್ಲೆ ಮತ್ತು ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಾಗಿ ಪೊಲೀಸರು ಪ್ರತಿದೂರು ದಾಖಲಿಸಿದ್ದಕ್ಕೆ ಸಂಬಂಧಿಸಿದಂತೆ ಇಬ್ಬರಿಗೆ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಾಗರಾಜ್ ಪುತ್ರನ್ ಹಾಗೂ ನಾಗೇಂದ್ರ ಪುತ್ರನ್ ಅವರಿಗೆ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರ ಕುಂದಾಪುರ ನ್ಯಾಯವಾದಿ ಶ್ಯಾಮಸುಂದರ ನಾಯರಿ ಹಾಗೂ ನೀಲ್ ಬ್ರಿಯಾನ್ ವಾದಿಸಿದ್ದರು.
ಕೋಟದ ಕೊರಗರ ಕಾಲನಿಯಲ್ಲಿ ರಾಜೇಶ್ ಅವರ ಮೆಹಂದಿ ಕಾರ್ಯಕ್ರಮದಲ್ಲಿ ಕೋಟ ಪೊಲೀಸರು ಕೊರಗರ ಮೇಲೆ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ಕೊರಗ ಸಮುದಾಯದ ರಾಜೇಶ್ ಕೋಟ ಅವರು ಎಸ್ಐಸಂತೋಷ್ ಬಿ. ಪಿ. ಮತ್ತಿತರರ ವಿರುದ್ದ ದೂರು ದಾಖಲಿಸಿದ್ದರು. ಈ ದೂರಿಗೆ ಪ್ರತಿಯಾಗಿ ರಾಜೇಶ್, ನಾಗೇಂದ್ರ ಪುತ್ರನ್, ನಾಗರಾಜ್ ಪುತ್ರನ್ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ ಜಾತಿ ನಿಂದನೆ ಮಾಡಿರುವುದಾಗಿ ಕೋಟ ಠಾಣೆಯ ಕಾನ್ಸ್ಟೇಬಲ್ ಜಯರಾಮ್ ಪ್ರತಿದೂರು ದಾಖಲಿಸಿದ್ದರು.