ಬೆಳ್ಮಣ್, ಜ 15(SM): ಕಾರ್ಕಳ ತಾಲೂಕಿನ ಅತ್ತೂರು ಸಂತ ಲಾರೆನ್ಸ್ ಬಸಿಲಕದಲ್ಲಿ ಜನವರಿ 27ರಿಂದ 31ರ ತನಕ ಐದು ದಿನಗಳ ಕಾಲ ನಡೆಯುವ ಅತ್ತೂರು ವಾರ್ಷಿಕ ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆದಿದ್ದು ಐದು ದಿನಗಳ ಜಾತ್ರಾ ಮಹೋತ್ಸವದಲ್ಲಿ ೨೫ ಲಕ್ಷಕ್ಕೂ ಮಿಕ್ಕಿ ಜನ ಆಗಮಿಸುವ ನಿರೀಕ್ಷೆಯಿದೆ ಎಂದು ಕ್ಷೇತ್ರದ ನಿರ್ದೇಶಕ ರೆ.ಫಾ. ಜಾರ್ಜ್ ಡಿಸೋಜಾ ತಿಳಿಸಿದರು.
ಚರ್ಚಿನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಜ.27ರಂದು ಬೆಳಿಗ್ಗೆ 7.30ಕ್ಕೆ ಬಲಿಪೂಜೆ ನಡೆಯಲಿದ್ದು ಅಂದು ಮಧ್ಯಾಹ್ನ 3 ಹಾಗೂ 5 ಗಂಟೆಗೆ ಮಕ್ಕಳಿಗಾಗಿ ವಿಶೇಷ ಬಲಿಪೂಜೆ ನಡೆಯಲಿದೆ. 28ರಂದು ಬೆಳಿಗ್ಗೆ 10ಕ್ಕೆ, 3.30ಕ್ಕೆ ಕ್ಕೆ ಅಸ್ವಸ್ಥರಿಗಾಗಿ ದಿವ್ಯ ಬಲಿಪೂಜೆ ನಡೆಯಲಿದೆ. ಐದು ದಿನಗಳಲ್ಲಿ 35 ಬಲಿಪೂಜೆಗಳು ಕೊಂಕಣಿಯಲ್ಲಿ, 11 ಬಲಿಪೂಜೆಗಳು ಕನ್ನಡದಲ್ಲಿ ನಡೆಯಲಿವೆ ಎಂದರು.
ಯಾತ್ರಿಕರ ಸುರಕ್ಷತೆಗಾಗಿ ಹಳೆಯ ಮತ್ತು ಹೊಸ ಇಗರ್ಜಿಗಳ ಒಳಗಡೆ ಪುಣ್ಯಕ್ಷೇತ್ರದ ವಠಾರದಲ್ಲಿ ಒಟ್ಟು 65ಕಡೆ ಸಿಸಿ ಕ್ಯಾಮರಾ ವ್ಯವಸ್ಥೆ ಮಾಡಲಾಗಿದೆ. ಕಾನೂನು ಮತ್ತು ಶಿಸ್ತು ಪಾಲನೆಗಾಗಿ ಗರಿಷ್ಠ ಸಂಖ್ಯೆಯ ಪೋಲಿಸ್ ಅಧಿಕಾರಿಗಳು, ಬಾಂಬ್ ನಿಷ್ಕ್ರಿಯ ದಳ ಹಾಗೂ ರಿಸರ್ವ್ ಪೋಲಿಸ್ ತುಕಡಿ ಹಾಗೂ ಪೋಲಿಸ್ ಸಿಬ್ಬಂದಿಗಳನ್ನು ನಿಯೋಜನೆಗೆ ಮನವಿ ಮಾಡಲಾಗಿದೆ. ಜಾತ್ರಾ ಕಾಲದಲ್ಲಿ ಭಿಕ್ಷಾಟನೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದರು.
ಕ್ಷೇತ್ರದ ವಠಾರದಲ್ಲಿ ಐದು ಕಡೆ ಶುದ್ಧ ಹಾಗೂ ತಂಪಾದ ನೀರಿನ ವ್ಯವಸ್ಥೆ ಮಾಡಲಾಗಿದೆ. ಪುಣ್ಯಕ್ಷೇತ್ರದ ವಠಾರದಲ್ಲಿ ಅನಧಿಕೃತ ಮೊಂಬತ್ತಿ ಮಾರಾಟ, ಮತ್ತು ಇತರ ವ್ಯಾಪಾರ ನಿಷೇಧಿಸಲಾಗಿದೆ. ಪುಣ್ಯಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳ ವಿಸ್ತರಣೆ ನಡೆದಿದ್ದು, ಸುಗಮ ಸಂಚಾರಕ್ಕೆ ವಿಶೇಷ ಗಮನ ನೀಡಲಾಗಿದೆ. ವಾಹನಗಳ ದಟ್ಟಣೆ ತಪ್ಪಿಸಲು ಧೂಪದಕಟ್ಟೆ ಸೇರಿದಂತೆ ಹಲವೆಡೆ ಸುಗಮ ಪಾರ್ಕಿಂಗ್ಗೆ ಅವಕಾಶ ಮಾಡಿಕೊಡಲಾಗಿದೆ. ಅಲ್ಲಿಂದ ನೇರ ಕ್ಷೇತ್ರಕ್ಕೆ ಬರಲು ಅನುಕೂಲ ದ್ವಾರದ ಎಡಭಾಗಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಾನ್ ಡಿಸಿಲ್ವ, ರಿಚರ್ಡ್ ಪಿಂಟೊ, ಕಾರ್ಯದರ್ಶಿ ಸಂತೋಷ ಡಿಸಿಲ್ವ, ವಲೆರಿಯನ್ ಪಾಯಸ್, ಲೀನಾ ಡಿಸಿಲ್ವ ಮೊದಲಾದವರು ಉಪಸ್ಥಿತರಿದ್ದರು.