ಮಂಗಳೂರು, ಜೂ 18 (DaijiworldNews/MS): ಸರ್ಕಾರದ ಜನಪರ ಯೋಜನೆಗಳನ್ನು ತಳಮಟ್ಟದಲ್ಲಿ ಜನಸಾಮಾನ್ಯರಿಗೆ ನೇರವಾಗಿ ಒದಗಿಸಬೇಕೆಂಬ ಸರ್ಕಾರದ ಆಶಯದಂತೆ ಜಿಲ್ಲೆಯ ಎಲ್ಲಾ ಕಂದಾಯ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಒಳಪಡುವ ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.
ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಇದೇ ಜೂ.18ರ ಮೂರನೇ ಶನಿವಾರ ಕಡಬ ತಾಲೂಕಿನ ಅಲಂಕಾರು ಗ್ರಾಮದಲ್ಲಿ (ದೀನ್ ದಯಾಳು, ರೈತ ಸಭಾಭವನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ) ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.
ಈ ಹಿನ್ನಲೆಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಪ್ರತಿಯೊಂದು ಸರ್ವೇ ಮಾಡಿಸಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಸ್ವೀಕರಿಸುವಂತೆ ನಿರ್ದೇಶನ ನೀಡಲಾಗಿದೆ. ಆದಾಗ್ಯೂ ಸಾರ್ವಜನಿಕರು ನೇರವಾಗಿ ತಮ್ಮ ಅಹವಾಲುಗಳನ್ನು ನೀಡಲು ಬಯಸಿದ್ದದಲ್ಲೀ, ಅಲಂಕಾರು ಗ್ರಾಮ ಪಂಚಾಯತ್ಗೆ ನೀಡಬಹುದಾಗಿದೆ.
ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಜತೆಯಲ್ಲಿದ್ದು, ಸಮಸ್ಯೆಗಳನ್ನು ಅದಷ್ಟು ಸ್ಥಳದಲ್ಲಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಯಾವುದೇ ಸಮಸ್ಯೆ ಸ್ಥಳದಲ್ಲಿ ಬಗೆಹರೆಯದಲ್ಲಿ ಮುಂದಿನ ಸೂಕ್ತವಾದ ದಿನವನ್ನು ನಿರ್ಧರಿಸಿ ಅದೇ ಗ್ರಾಮದಲ್ಲಿಯೇ ಮತ್ತೊಮ್ಮೆ ಗ್ರಾಮ ವಾಸ್ತವ್ಯ ನಡೆಸಲು ನಿರ್ಧರಿಸಲಾಗುವುದು. ಈ ಸಮಯದಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಕೋವಿಡ್ ಸಮುಚಿತ ವರ್ತನೆಗಳನ್ನು ಪಾಲನೆ ಮಾಡುವಂತೆ ಅಪರ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ