ಕಾಸರಗೋಡು, ಜೂ 17 (DaijiworldNews/HR): ಜಿಲ್ಲೆಯಲ್ಲಿ ಇದುವರೆಗೆ 1,158 ಎಂಡೋಸಲ್ಫಾನ್ ಸಂತಸ್ತರಿಗೆ 45.75 ಕೋಟಿ ರೂ. ವಿತರಿಸಲಾಗಿದ್ದು, 2,102 ಮಂದಿಗೆ ಪರಿಹಾರ ಧನ ವಿತರಿಸಲು ಬಾಕಿ ಇದ್ದು, ಸರಕಾರ ಒದಗಿಸಿದ 200 ಕೋಟಿ ರೂ. ವನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಸಂತ್ರಸ್ಥರಿಗೆ ವಿತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ತಿಳಿಸಿದ್ದಾರೆ.
ಧನಸಹಾಯ ವಿತರಣೆ ವಿಳಂಬ ಹಾಗೂ ಸಂತ್ರಸ್ತರ ಅನುಕೂಲಕ್ಕಾಗಿ ಆನ್ಲೈನ್ ವೆಬ್ ಪೋರ್ಟಲ್ ಮೂಲಕ ಮಾತ್ರ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಆನ್ಲೈನ್ ವ್ಯವಸ್ಥೆ ಜಾರಿಗೆ ಬರುವ ಮೊದಲು ಜಿಲ್ಲಾಧಿಕಾರಿ ಕಚೇರಿಗೆ ನೇರವಾಗಿ ಸಲ್ಲಿಸಿದ್ದ 200 ಮಂದಿಯ ಅರ್ಜಿಗಳನ್ನು ಜಿಲ್ಲಾಧಿಕಾರಿ ಕಚೇರಿಯಿಂದಲೇ ಆನ್ಲೈನ್ ಮೂಲಕ ವರ್ಗಾಯಿಸಲಾಗಿತ್ತು.
ಈ ಹಿಂದೆ ಅರ್ಜಿ ಸಲ್ಲಿಸದೇ ಇರುವವರು ಹಾಗೂ ಆರ್ಥಿಕ ಸಹಾಯಕ್ಕೆ ಅರ್ಹರಾಗಿರುವವರು ಸಾಕಷ್ಟು ದಾಖಲೆಗಳೊಂದಿಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದರೆ ಎಂಡೋಸಲ್ಫಾನ್ ಪರಿಹಾರಕ್ಕಾಗಿ ಆದಷ್ಟು ಬೇಗ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ತಿಳಿಸಿದ್ದಾರೆ.