ಕಾಸರಗೋಡು, ಜೂ 16 (DaijiworldNews/SM): ಪಾಲಕುನ್ನು ಅಂಬಿಕಾ ಆಂಗ್ಲ ಮಾಧ್ಯಮ ಶಾಲೆಯಿಂದ ಸುಮಾರು ಎರಡು ಲಕ್ಷ ರೂ. ಮೌಲ್ಯದ ಟ್ಯಾಬ್ ಗಳನ್ನು ಕಳವುಗೈದ ಘಟನೆ ನಡೆದಿದ್ದು, ಈ ಬಗ್ಗೆ ಬೇಕಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಇಬ್ಬರು ಶಾಲೆಯ ಬಾಗಿಲು ಮುರಿದು ಒಳನುಗ್ಗಿದ್ದು, 14 ಹೊಸದಾದ ಟ್ಯಾಬ್ ಗಳನ್ನು ಕಳವು ಮಾಡಿದ್ದಾರೆ. ಬುಧವಾರ ಬೆಳಿಗ್ಗೆ ಕೃತ್ಯ ಬೆಳಕಿಗೆ ಬಂದಿದೆ. ಶಾಲಾ ಕಚೇರಿಯ ಕಪಾಟಿನಲ್ಲಿ ಈ ಟ್ಯಾಬ್ ಗಳನ್ನು ಇಡಲಾಗಿತ್ತು. ಕೃತ್ಯ ಬೆಳಕಿಗೆ ಬಂದ ಬಳಿಕ ಶಾಲಾ ಅಧಿಕಾರಿಗಳು ಬೇಕಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು , ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಆರೋಪಿಗಳು ಮುಸುಕುಧಾರಿಗಳಾಗಿ ಒಳನುಗ್ಗಿದ್ದು , ಸಿ ಸಿ ಟಿವಿ ದ್ರಶ್ಯ ಗಳು ಲಭಿಸಿದ್ದರೂ ಆರೋಪಿಗಳ ಸುಳಿವು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ . ಸ್ಮಾರ್ಟ್ ಕ್ಲಾಸ್ ಗೆ ಸಂಬಂಧ ಪಟ್ಟಂತೆ ಟ್ಯಾಬ್ ಗಳನ್ನು ಶಾಲೆಯಲ್ಲಿ ತಂದಿರಿಸಲಾಗಿತ್ತು. ಬೇಕಲ ಪೊಲೀಸರು ತನಿಖೆ ನಡೆಸುತ್ತಿದ್ದು , ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಮಾಹಿತಿ ಕಲೆ ಹಾಕಿದ್ದಾರೆ.