ಉಡುಪಿ, ಜೂ 16 (DaijiworldNews/HR): ಗ್ರಾಮೀಣ ಪ್ರದೇಶದಲ್ಲಿ ಪುಟಾಣಿಗಳ ದಾಖಲಾತಿ ಕಡಿಮೆಯಾಗಿ ಕೆಲವು ಅಂಗನವಾಡಿಗಳು ಮುಚ್ಚುವ ಸ್ಥಿತಿಯನ್ನು ಕಾಣುತ್ತಿದೆ. ಆದರೆ ಇಲ್ಲಿ ಯಾವ ಪ್ಲೇ ಸ್ಕೂಲಿಗೂ ಕಡಿಮೆ ಇಲ್ಲವೆಂಬಂತೆ ಶಿರ್ವ ಗ್ರಾಮದ ಬಂಟಕಲ್ಲೊಂದು 'ಜಿಲ್ಲೆಯ ಮೊದಲ ಹವಾನಿಯಂತ್ರಿತ ಅಂಗನವಾಡಿ' ಈಗ ಎಲ್ಲರ ಗಮನ ಸೆಳೆಯುತ್ತಿದೆ.
ಮಹಿಳಾ , ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ದಾನಿಗಳ ಸಹಕಾರದಿಂದ ಸುಮಾರು 20.5 ಲ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಹೈಟೆಕ್ ಸ್ಪರ್ಶವಿರುವ ಜಿಲ್ಲೆಯ ಮೊದಲ ಹವಾನಿಯಂತ್ರಿತ ಅಂಗನವಾಡಿ ಕೇಂದ್ರವು ಕಾಪು ತಾಲೂಕು ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದೆ.
ದಿ| ಅಚ್ಯುತ ಕಾಮತ್ ಅವರು ಗ್ರಾಮ ಪಂಚಾಯತ್ ಗೆ ದಾನವಾಗಿ ನೀಡಿದ 6 ಸೆಂಟ್ಸ್ ಜಾಗದಲ್ಲಿ ತೀರಾ ದುಸ್ಥಿತಿಯ 35 ವರ್ಷದ ಹಳೆಯ ಕಟ್ಟಡದಲ್ಲಿ ಈ ಕೇಂದ್ರವು ಕಾರ್ಯ ನಿರ್ವಹಿಸುತ್ತಿತ್ತು. ಅಪಾಯಕಾರಿ ಸ್ಥಿತಿಯಲ್ಲಿದ್ದ ಅಂಗನವಾಡಿಗೆ, ಸರಕಾರದ ಅನುದಾನದ ಜೊತೆಗೆ ದಾನಿಗಳ ಸಹಕಾರದಿಂದ ಆ ಕಟ್ಟಡಕ್ಕೆ ಹೊಸ ರೂಪು ನೀಡಿದೆ.
ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಕೆ.ಆರ್.ಪಾಟ್ಕರ್ ಅವರ ಸತತ 6 ವರ್ಷಗಳ ಪರಿಶ್ರಮದಿಂದ ಅಂಗನವಾಡಿ ಕೇಂದ್ರಕ್ಕೆ ಇದೀಗ ಹೊಸ ಕಟ್ಟಡದೊಂದಿಗೆ ಆಧುನಿಕ ಸ್ಪರ್ಶ ದೊರೆತಿದೆ.
ಅಂಗನವಾಡಿ ಸುತ್ತಲೂ ಆವರಣ ಗೋಡೆ, ಕೊಠಡಿಗೆ ಹವಾ ನಿಯಂತ್ರಿತ ವ್ಯವಸ್ಥೆ, ಗೋಡೆ ಬರಹ, ಕಾರ್ಟೂನ್ ಚಿತ್ರಗಳು, ಕೇಬಲ್ ಟಿವಿ ಸಂಪರ್ಕದೊಂದಿಗೆ ಪುಟಾಣಿಗಳಿಗೆ ಕಾರ್ಟೂನ್ ನೆಟ್ವರ್ಕ್ ನೋಡುವ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಆವರಣ ಗೋಡೆಯಲ್ಲಿ ಮಕ್ಕಳನ್ನು ಆಕರ್ಷಿಸುವ ಗೊಂಬೆಗಳ ಚಿತ್ರ ಮತ್ತು ಸರಕಾರದ ಯೋಜನೆಗಳ ಉಪಯುಕ್ತ ಮಾಹಿತಿಯನ್ನು ಗೋಡೆಯಲ್ಲಿ ಚಿತ್ರಿಸಲಾಗಿದೆ. ಪುಟಾಣಿಗಳಿಗಾಗಿ ನೆರಳಿರುವ ಪ್ರತ್ಯೇಕ ಜಾರುಬಂಡಿ, ಸುಮಾರು 800 ಚ.ಅಡಿ ಚಪ್ಪರ, 1000 ಚ.ಅಡಿಯ ಇಂಟರ್ಲಾಕ್, ಮಕ್ಕಳ ಹೆತ್ತವರಿಗಾಗಿ ವಿರಮಿಸಲು ಕಾಂಕ್ರೀಟ್ ಬೆಂಚುಗಳು, ಎರಡು ಶೌಚಾಲಯ, 24 ಗಂಟೆಗಳ ಕುಡಿಯುವ ನೀರಿನ ವ್ಯವಸ್ಥೆಯೊಂದಿಗೆ ವಾಟರ್ ಪ್ಯೂರಿಫೈಯರ್, ಸೋಫಾ, ಚಪ್ಪಲ್ ಸ್ಟಾಂಡ್, ಬ್ಯಾಗ್ ಸ್ಟಾಂಡ್, ಮಕ್ಕಳಿಗಾಗಿ ಸಣ್ಣ ಕುರ್ಚಿಗಳು , ಸಮವಸ್ತ್ರ, ಟೇಬಲ್ ಮತ್ತು ಕುರ್ಚಿ ಹಾಗೂ ಆವರಣದಲ್ಲಿ ಸೋಲಾರ್ ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾನೈಟ್ ಹೊದಿಕೆಯ ಅಡುಗೆ ಕೋಣೆಯೊಂದಿಗೆ ಗ್ರೈಂಡರ್ ಮತ್ತು ಗ್ಯಾಸ್ ಸ್ಟೌ ಸೌಲಭ್ಯ ಕಲ್ಪಿಸಲಾಗಿದೆ. ಪೌಷ್ಟಿಕ ಆಹಾರಕ್ಕಾಗಿ, ಪಕ್ಕಾದಲ್ಲಿ ತೋಟ ರಚನೆ ಮಾಡಿ ಅಲಂಕಾರಿಕ ಗಿಡ ಮತ್ತು ತರಕಾರಿಗಳನ್ನು ಬೆಳೆಸಲಾಗುತ್ತಿದ್ದು, ಮಕ್ಕಳಿಗೆ ಉಣ ಬಡಿಸಲಾಗುತ್ತಿದೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಲೋಕೋಪಯೋಗಿ ಇಲಾಖೆಯ ಉಸ್ತುವಾರಿಯಲ್ಲಿ ಸುಮಾರು 16.5 ಲ. ರೂ.ಗಳಲ್ಲಿ ಕಟ್ಟಡ ನಿರ್ಮಿಸಿಕೊಟ್ಟಿದೆ. ದೇಶ ವಿದೇಶಗಳಲ್ಲಿ ನೆಲೆಸಿರುವ ತನ್ನ ಸ್ನೇಹಿತರು, ಪರಿಸರದ ಸಂಘಸಂಸ್ಥೆಗಳು ಹಾಗೂ ವಾಟ್ಸಾಪ್ ಸಂದೇಶಕ್ಕೆ ಸ್ಪಂದಿಸಿದ ದಾನಿಗಳ ಸಹಕಾರದಿಂದ ಗ್ರಾ.ಪಂ. ಅಧ್ಯಕ್ಷ ಕೆ.ಆರ್.ಪಾಟ್ಕರ್ ಸುಮಾರು 4 ಲ.ರೂ. ವೆಚ್ಚದಲ್ಲಿ ಅಂಗನವಾಡಿ ಕೇಂದ್ರಕ್ಕೆ ಹೈಟೆಕ್ ಸ್ಪರ್ಶ ನೀಡಿದ್ದಾರೆ.
ಸಂಘ ಸಂಸ್ಥೆಗಳಾದ ಬಂಟಕಲ್ಲು ನಾಗರಿಕ ಸೇವಾ ಸಮಿತಿ, ಬಂಟಕಲ್ಲು ಶ್ರೀ ದುರ್ಗಾ ಮಹಿಳಾ ಚೆಂಡೆ ಬಳಗ, ಲಯನ್ಸ್ ಕ್ಲಬ್ ಬಂಟಕಲ್ಲು -ಬಿಸಿ ರೋಡ್, ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್, ಲಯನ್ಸ್ ಕ್ಲಬ್ ಉಡುಪಿ-ಕರಾವಳಿ, ರೋಟರಿ ಕ್ಲಬ್ ಶಿರ್ವ, ಸ್ತ್ರೀಶಕ್ತಿ ಸಂಘ ಮತ್ತು ಇತರ ದಾನಿಗಳು ಸಹಕರಿಸಿದ್ದಾರೆ.
ಕೇಂದ್ರದಲ್ಲಿ 30 ಮಕ್ಕಳಿದ್ದು, ಅಂಗನವಾಡಿ ಕಾರ್ಯಕರ್ತೆಯಾಗಿ ವಿನಯಾ ಹರೀಶ್ ಕುಂದರ್, ಸಹಾಯಕಿ ಸಂಧ್ಯಾ ಆಚಾರ್ಯ ಮತ್ತು ಮೇಲ್ವಿಚಾರಕಿಯಾಗಿ ಶೈಲಾ ಕಾರ್ಯನಿರ್ವಹಿಸುತ್ತಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿರುವ ಈ ಹೊಸ ರೂಪ ಕೊಟ್ಟ ಅಂಗನವಾಡಿಗೆ ಪೋಷಕರು ತಮ್ಮ ಮಕ್ಕಳನ್ನು ಖುಷಿಯಿಂದ ಕಳುಹಿಸುತ್ತಿದ್ದಾರೆ, ಇಂದೊಂದು 'ಮಾದರಿ ಅಂಗನವಾಡಿ' ಎಂದು ಊರಿನವರು ಕೂಡ ಹೆಮ್ಮೆ ವ್ಯಕ್ತಪಡಿಸಿದ್ದಾರೆ.