ಉಡುಪಿ, ಜೂ 16 (DaijiworldNews/MS): ಉಡುಪಿಯ ಯುವ ಕಲಾವಿದ ಮಹೇಶ್ ಮರ್ಣೆ ಅಶ್ವತ್ಥ ಎಲೆಯಲ್ಲಿ ರಚಿಸಿದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಭಾವಚಿತ್ರಕ್ಕೆ ಸ್ವತಃ ಕ್ರಿಕೆಟ್ ದೇವರೆಂದೇ ಖ್ಯಾತರಾದ ಸಚಿನ್ ತೆಂಡೂಲ್ಕರ್ ಅವರು ಮೆಚ್ಚಿ ಅಭಿನಂದಿಸಿದ್ದಾರೆ.
ಉಡುಪಿಯ ಮರ್ಣೆ ಎಂಬ ಪುಟ್ಟ ಊರಿನ ಕಲಾವಿದರಾಗಿರುವ ಮಹೇಶ್ ಈಗಾಗಲೇ ಹಲವಾರು ಖ್ಯಾತನಾಮರ ಭಾವಚಿತ್ರಗಳನ್ನು ಅಶ್ವತ್ಥ ಎಲೆಯಲ್ಲಿ ಬಿಡಿಸುವ ಮೂಲಕ ಖ್ಯಾತರಾಗಿದ್ದಾರೆ. ಸುಮಾರು ಆರು ತಿಂಗಳ ಹಿಂದೆ ಮಹೇಶ್ ಅವರು ಸಚಿನ್ ತೆಂಡೂಲ್ಕರ್ ಅವರ ಭಾವಚಿತ್ರವನ್ನು ಅಶ್ವತ್ಥ ಎಲೆಯಲ್ಲಿ ಚಿತ್ರಿಸಿದ್ದರು. ಕೇವಲ ಏಳು ನಿಮಿಷಗಳಲ್ಲಿ ಈ ಚಿತ್ರವನ್ನು ಬಿಡಿಸಿ ಅತಿ ವೇಗವಾಗಿ ಭಾವಚಿತ್ರವನ್ನು ಬಿಡಿಸಿ ಎಕ್ಸ್ಕ್ಲೂಸಿವ್ ವರ್ಲ್ಡ್ ರೆಕಾರ್ಡ್ಸ್ ಸರ್ಟಿಫಿಕೇಟ್ ಅನ್ನು ಪಡೆದುಕೊಂಡಿದ್ದರು.
ಅಶ್ವತ್ಥ ಎಲೆಯಲ್ಲಿ ಬಿಡಿಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಭಾವಚಿತ್ರವನ್ನು ಮಹೇಶ್ ಮರ್ಣೆ ಸಚಿನ್ ಅವರಿಗೆ ಕಳುಹಿಸಿಕೊಟ್ಟಿದ್ದರು. ಮಹೇಶ್ ಅವರ ಕಲಾ ಚಾರ್ತುರ್ಯವನ್ನು ಮೆಚ್ಚಿ ಸ್ವತಃ ಸಚಿನ್ ತೆಂಡೂಲ್ಕರ್ ಅವರೇ ಪ್ರಶಂಸನಾ ಪತ್ರದ ಜೊತೆಗೆ ತಮ್ಮ ಅಚ್ಚುಮೆಚ್ಚಿನ ಎರಡು ಫೊಟೋಗಳನ್ನು ಮಹೇಶ್ ಅವರಿಗೆ ಕಳುಹಿಸಿಕೊಟ್ಟಿದ್ದಾರೆ.
"೨೦೨೧ ಮಾರ್ಚ್ ನಲ್ಲಿ ಅಶ್ವತ್ಥ ಎಲೆಯಲ್ಲಿ ೭ ನಿಮಿಷದಲ್ಲಿ ರಚಿಸಿದ್ದ ಸಚಿನ್ ತೆಂಡೂಲ್ಕರ್ ಅವರ ಭಾವಚಿತ್ರವು ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಗೆ ಆಯ್ಕೆಯಾಗಿತ್ತು. ಸಚಿನ್ ತೆಂಡೂಲ್ಕರ್ ಅವರ ಇನ್ನೊಂದು ಭಾವಚಿತ್ರವನ್ನು ರಚಿಸಿ ಅವರ ವಿಳಾಸಕ್ಕೆ ಕಳುಹಿಸಿದ್ದೆ. ಇದೀಗ ಆರು ತಿಂಗಳ ಬಳಿಕ ಅವರ ಪ್ರತಿಕ್ರಿಯೆ ಬಂದಿದೆ. ತುಂಬಾ ಖುಷಿ ಯಾಗಿದೆ" ಎಂದು ಕಲಾವಿದ ಮಹೇಶ್ ಮರ್ಣೆ ಪ್ರತಿಕ್ರಿಯಿಸಿದ್ದಾರೆ.