ಮಂಗಳೂರು, ಜೂ 16 (DaijiworldNews/MS): ಹಿರಿಯ ನಾಗರೀಕರನ್ನು ಶೋಷಿಸುವವರ ವಿರುದ್ಧ ದೂರು ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ ಅವರು ಯುವಜನತೆಗೆ ಕರೆ ನೀಡಿದರು.
ಅವರು ಜೂ.15ರ ಬುಧವಾರ ರಾಷ್ಟ್ರೀಯ ಹಿರಿಯ ನಾಗರೀಕರ ಸಹಾಯವಾಣಿ ಎಲ್ಡರ್ ಲೈನ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ನಗರದ ಜಿಲ್ಲಾಧಿಕಾರಿಯವರ ಕಚೇರಿ ಗೇಟ್ನ ಎದುರು ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನ 2022 ಅನ್ನು ಗುರುತಿಸಲು ಬೀದಿ ನಾಟಕ ಹಾಗೂ ಜಾಗೃತಿ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಶಿಕ್ಷಣ, ಉದ್ಯೋಗವನ್ನರಸಿ ಯುವ ಜನತೆ ಪಟ್ಟಣ ಅಥವಾ ವಿದೇಶಗಳಿಗೆ ಹೋದಾಗ ಹಿರಿಯ ನಾಗರಿಕರು ಮನೆಯಲ್ಲಿ ಒಂಟಿಯಾಗುತ್ತಾರೆ, ಅಂತಹ ಸಮಯದಲ್ಲಿ ಅವರ ಮೇಲೆ ದೌರ್ಜನ್ಯಗಳಾಗುತ್ತಿದ್ದರೆ, ಅವರು ನಿಂದನೆಗೊಳಾಗುತ್ತಿದ್ದರೆ ಅಥವಾ ತೊಂದರೆಗಳಿಗೆ ಸಿಲುಕಿದ್ದಲ್ಲೀ ಕೂಡಲೇ ಸಹಾಯವಾಣಿ 14567ಕ್ಕೆ ಕರೆ ಮಾಡಿ ಅವರನ್ನು ರಕ್ಷಿಸಬಹುದು, ಅಲ್ಲದೇ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿದರೆ ತುರ್ತು ವಾಹನ ಆಗಮಿಸಿ ನೊಂದವರಿಗೆ ನೆರವು ನೀಡಲಿದೆ, ಈ ಕೆಲಸ ಯುವ ಜನತೆಯಿಂದಲೇ ಪ್ರಾರಂಭವಾಗಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶೋಭಾ ಬಿ.ಜೆ., ಮಾತನಾಡಿ, ಹಿರಿಯ ಶೋಷಣೆ, ನಿಂದನೆ ವಿರುದ್ದ ದಂಡ, ಶಿಕ್ಷೆ ವಿಧಿಸುವ ಕಾನೂನುಗಳಿದ್ದು, ಈ ಬಗ್ಗೆ ಅರಿತುಕೊಂಡು ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು, ಅದೇ ವೇಳೆ ಶೋಷಣೆ ಕಂಡುಬಂದಾಗ ಅವರಿಗೆ ನೆರವು ನೀಡಬೇಕು, ವಿದ್ಯಾರ್ಥಿಗಳು ಕೂಡ ಬಸ್ಸಿನಲ್ಲಿ, ರಸ್ತೆಗಳಲ್ಲಿ ಹಿರಿಯ ನಾಗರೀಕರಿಗೆ ತೊಂದರೆಯಾಗದಂತೆ ಕಾಳಜಿ ವಹಿಸಬೇಕು ಎಂದು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ನಾಗರತ್ನ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಕಲ್ಯಾಣಾಧಿಕಾರಿ ಗೋಪಾಲಕೃಷ್ಣ ಹಾಗೂ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಇದೇ ವೇಳೆ ಹಿರಿಯ ನಾಗರೀಕರ ಶೋಷಣೆ ವಿರುದ್ಧ ಜಾಗೃತಿ ಮೂಡಿಸುವ ಬೀದಿ ನಾಟಕವೊಂದನ್ನು ಪ್ರಸ್ತುತ ಪಡಿಸಲಾಯಿತು.