ಮಂಗಳೂರು, ಜೂ 15 (DaijiworldNews/SM): ಕೈಗಾರಿಕಾ ವಲಯ ಸ್ಥಾಪನೆಗಾಗಿ ಕೆಐಎಡಿಬಿಯಿಂದ ಸ್ವಾಧೀನಪಡಿಸಿಕೊಳ್ಳಲಾಗುವ ಬಳ್ಕುಂಜೆ, ಕೊಲ್ಲೂರು ಹಾಗೂ ಉಳೆಪಾಡಿ ಗ್ರಾಮಗಳ ಗುಂಪು ಮನೆಗಳು ಹಾಗೂ ಧಾರ್ಮಿಕ ಕೇಂದ್ರಗಳಿಗೆ ಯಾವುದೇ ತೊಂದರೆಯಿಲ್ಲವೆಂದು, ಅವುಗಳನ್ನು ಉಳಿಸಲಾಗುತ್ತದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಭರವಸೆ ನೀಡಿದ್ದಾರೆ.
ಕೃಷಿ ಭೂಮಿಗಳನ್ನು ಪಡೆಯುವಾಗಲೂ ವಾರಸುದಾರರಿಗೆ ಉತ್ತಮ ಬೆಲೆಯನ್ನು ನಿಗದಿಪಡಿಸಿ ಖರೀದಿ ಮಾಡುವ ಪ್ರಸ್ತಾವನೆ ಸರಕಾರದ ಹಂತದಲ್ಲಿದೆ. ಅಲ್ಲದೆ ಈ ಪ್ರದೇಶಗಳ ಹಸಿರು ವಾತಾವರಣವನ್ನು ಉಳಿಸಲು ಅಲ್ಲಿ ಹಸಿರು ಯೋಜನೆಯಿರುವ ಮಾಲಿನ್ಯಕಾರಕವಲ್ಲದ ಕೈಗಾರಿಕೆಗಳು ಅಲ್ಲಿಗೆ ಬರುತ್ತದೆ. ಆದ್ದರಿಂದ ಕೈಗಾರಿಕ ವಲಯವನ್ನು ನಿರ್ಮಾಣ ಮಾಡುವ ಸಾಮಾರ್ಥ್ಯವನ್ನು ನೋಡಿಕೊಂಡು ಸಾಮಾಜಿಕ ಹಾಗೂ ಆರ್ಥಿಕ ಪರಿಣಾಮಗಳನ್ನು ಅಧ್ಯಯನ ಮಾಡಿಯೇ ಕೆಐಎಡಿಬಿಯವರು ಇಲ್ಲಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುತ್ತಾರೆ. ಆದ್ದರಿಂದ ಜನತೆ ಆತಂಕಗೊಳಗಾಗುವ ಅಗತ್ಯವಿಲ್ಲ ಎಂದು ಹೇಳಿದರು.
ಅರಣ್ಯ ಇಲಾಖೆ, ತೋಟಗಾರಿಕಾ ಇಲಾಖೆಗೆ ಮರಗಳ ನಾಶಕ್ಕೆ ಯಾವೆಲ್ಲ ಪರಿಹಾರ ಕೊಡಬೇಕೋ ಅದನ್ನು ನಿಯಮಾನುಸಾರವೇ ಮಾಡಲಾಗುತ್ತದೆ. ಈ ರೀತಿಯ ಪ್ರಕ್ರಿಯೆಯಲ್ಲಿ ಸಂಬಂಧಪಟ್ಟವರಿಗೆ ಸರಿಯಾದ ಪರಿಹಾರ ನೀಡದೆ ಭೂಸ್ವಾಧೀನ ಮಾಡಲಾಗುವುದಿಲ್ಲ. ಇಲ್ಲಿನ ಭೂಮಿಯೊಂದಿಗೆ ಜನತೆಯ ಭಾವನಾತ್ಮಕ ಸಂಬಂಧಕ್ಕೆ ನಿಜವಾಗಿಯೂ ಬೆಲೆಕಟ್ಟಲಸಾಧ್ಯ. ಆದರೂ ಸರಕಾರದ ಮಾನದಂಡದ ಪ್ರಕಾರ ಹೆಚ್ಚಿನ ರೀತಿಯ ಪರಿಹಾರವನ್ನು ಖಂಡಿತಾ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.