ಕಾರ್ಕಳ, ಜೂ 15 (DaijiworldNews/DB): ವ್ಯಕ್ತಿಯೊಬ್ಬರಿಗೆ ವ್ಯವಹಾರ ಸಂಬಂಧವಾಗಿ ಜೀವ ಬೆದರಿಕೆ ಒಡ್ಡಿದ ಪ್ರಕರಣದಲ್ಲಿ 16 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರ ಸಹಕಾರದೊಂದಿಗೆ ಕಾರ್ಕಳ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೆಳ್ತಂಗಡಿಯ ಕಾಶಿಬೆಟ್ಟು ನಿವಾಸಿ ಶಕ್ತಿವೇಲು ಎಂದು ಗುರುತಿಸಲಾಗಿದೆ. ಕಾರ್ಕಳದಲ್ಲಿ ಕೇಬಲ್ ವ್ಯವಹಾರ ಮಾಡುತ್ತಿದ್ದ ಈತ 2006ರಲ್ಲಿ ಕುಕ್ಕಂದೂರು ಹುಡ್ಕೋ ನಿವಾಸಿ ಪ್ರಶಾಂತ್ ನಾಯಕ್ ಅವರಿಗೆ ಚೂರಿ ತೋರಿಸಿ ಜೀವ ಬೆದರಿಕೆ ಹಾಕಿದ್ದ. ಈ ಸಂಬಂಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ, ಆರೋಪಿ ಪೊಲೀಸರ ಕೈಗೆ ಸಿಗದೆ ತಮಿಳುನಾಡಿನಲ್ಲಿ ತಲೆ ಮರೆಸಿಕೊಂಡಿದ್ದ. ಕಾರ್ಕಳ ನ್ಯಾಯಾಲಯವು ಆರೋಪಿ ವಿರುದ್ದ ಬಂಧನ ವಾರಂಟ್ ಹೊರಡಿಸಿತ್ತು. ಇದೀಗ 16 ವರ್ಷದ ಬಳಿಕ ಆತ ಬೆಳ್ತಂಗಡಿಗೆ ಬಂದಿರುವ ಮಾಹಿತಿ ಪಡೆದುಕೊಂಡ ಕಾರ್ಕಳ ಪೊಲೀಸರು ಬೆಳ್ತಂಗಡಿ ಪೊಲೀಸರ ಸಹಕಾರ ಪಡೆದು ಆರೋಪಿಯನ್ನು ಬಂಧಿಸಿದರು. ಜೂನ್ 14ರಂದು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಡಿವೈಎಸ್ಪಿ ವಿಜಯಪ್ರಸಾದ್, ವೃತ್ತ ನಿರೀಕ್ಷಕ ಸಂಪತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆ ಎಸ್ಐ ಪ್ರಸನ್ನಕುಮಾರ್, ಅಪರಾಧ ವಿಭಾಗದ ಎಸ್ಐ ದಾಮೋದರ್, ಎಎಸ್ಐ ರಾಜೇಶ್ ಪಿ., ಎಚ್ಸಿ ಪ್ರಸನ್ನ ಹೆಗ್ಡೆ, ಸಿದ್ದರಾಯ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಈ ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳನ್ನು ಈ ಹಿಂದೆಯೇ ದಸ್ತಗಿರಿ ಮಾಡಲಾಗಿದೆ.