ಮಂಗಳೂರು, ಜೂ 15 (DaijiworldNews/DB): ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಮತ್ತು ರಾಹುಲ್ ಗಾಂಧಿಯವರ ಜನಪ್ರಿಯತೆಯ ಆತಂಕದಿಂದಾಗಿ ಜಾರಿ ನಿರ್ದೇಶನಾಲಯವನ್ನು ಬಳಸಿಕೊಂಡು ಅವರ ಮೇಲೆ ಬಿಜೆಪಿ ದಾಳಿ ಮಾಡುತ್ತಿದೆ ಎಂದು ಶಾಸಕ ಯು. ಟಿ. ಖಾದರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಜಾರಿ ನಿರ್ದೇಶನಾಲಯವು ಈ ಮಟ್ಟಕ್ಕೆ ಇಳಿದಿರುವುದು ವಿಷಾದಕರವಾಗಿದೆ. ಇದು ಬಿಜೆಪಿ ಸರ್ಕಾರದ ದೌರ್ಬಲ್ಯವನ್ನು ಸೂಚಿಸುತ್ತದೆ ಎಂದರು.
ರಾಹುಲ್ ಗಾಂಧಿಯವರ ಜನಪ್ರಿಯತೆ ನೋಡಿ ಬಿಜೆಪಿ ಕಂಗಾಲಾಗಿದೆ. ಅವರು ಕೇವಲ ವ್ಯಕ್ತಿಯಲ್ಲ, ಶಕ್ತಿಯ ಸಂಕೇತ. ಪ್ರಜಾಪ್ರಭುತ್ವದ ಮೇಲಿರುವ ಅವರ ಅಭಿಮಾನ, ಗುರಿ, ವಿವಿಧ ಕ್ಷೇತ್ರಗಳ ಮೇಲಿರುವ ಜ್ಞಾನ ಮತ್ತು ನಾಯಕತ್ವ ಗುಣದಿಂದಾಗಿ ಬಿಜೆಪಿ ಹೆದರಿದೆ. ಅದಕ್ಕಾಗಿ ಅವರ ಮೇಲೆ ಇಡಿಯನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಆದರೆ ಅವರು ಖಂಡಿತಾ ಜನರ ನಂಬಿಕೆಯನ್ನು ಉಳಿಸಿಕೊಳ್ಳಲಿದ್ದಾರೆ ಎಂದು ಖಾದರ್ ತಿಳಿಸಿದರು.
ನಾರಾಯಣಗುರು, ಬಸವಣ್ಣ ಸೇರಿದಂತೆ ವಿವಿಧ ಮಹಾನ್ ವ್ಯಕ್ತಿಗಳ ವಿಚಾರಧಾರೆಗಳನ್ನು ಪಠ್ಯಪುಸ್ತಕದಿಂದ ತೆಗೆದು ಹಾಕಿರುವ ಕುರಿತು ಸರ್ಕಾರ ಸ್ಪಷ್ಟಪಡಿಬೇಕು. ವಿಶೇಷವಾಗಿ ಕುವೆಂಪು, ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳನ್ನು ಮಕ್ಕಳಿಗೆ ತಿಳಿಹೇಳುವುದು ಅವಶ್ಯವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ವಿದ್ಯಾರ್ಥಿಗಳ ಭವಿಷ್ಯ ಆಪತ್ತಿನಲ್ಲಿದೆ ಎಂದವರು ಇದೇ ವೇಳೆ ಆತಂಕ ವ್ಯಕ್ತಪಡಿಸಿದರು.
ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾರ ವಿವಾದಾತ್ಮಕ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನೂಪುರ್ ಶರ್ಮ ವಿರುದ್ದ ಕ್ರಮ ಕೈಗೊಳ್ಳುವುದಕ್ಕೆ ಸರ್ಕಾರ ತಡ ಮಾಡುತ್ತಿದೆ. ಜವಾಬ್ದಾರಿಯುತವಾಗಿ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಬೇಕು. ಆದರೆ, ಪ್ರತಿಭಟನೆ ಮಾಡಿ ಸಾರ್ವಜನಿಕ ಆಸ್ತಿಗೆ ಹಾನಿಯುಂಟು ಮಾಡುವುದು ತಪ್ಪು. ಪ್ರತಿಭಟನೆ ಯಾವಾಗಲೂ ಶಾಂತ ರೀತಿಯಲ್ಲಿ ಇರಬೇಕೇ ಹೊರತು, ಕಾನೂನು ಕೈಗೆತ್ತಿಕೊಳ್ಳುವ ಕೆಲಸವನ್ನು ಯಾರೂ ಮಾಡಬಾರದು ಎಂದರು. ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿಗಳನ್ನು ಹರಡಿ ಸಾಮಾಜಿಕ ಸ್ವಾಸ್ಥ್ಯ ಕೆಡಿಸುವವರ ವಿರುದ್ದ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ಅವರು ಒತ್ತಾಯಿಸಿದರು.