ಮಂಗಳೂರು,ಜ 15 (MSP): ನಗರದ ಹೊರವಲಯದ ಅಡ್ಯಾರ್ ಗ್ರಾಮದಲ್ಲಿನ ಅಡ್ಯಾರ್ ಹಿಲ್ಸ್ ಎಂಬ ಹೋಂ ಸ್ಟೇ ಮೇಲೆ ಸೋಮವಾರ ದಾಳಿ ನಡೆಸಿದ ನಗರ ಅಪರಾಧ ಘಟಕದ ಪೊಲೀಸರು, ಅಂದರ್– ಬಾಹರ್ ಜೂಜಾಟದಲ್ಲಿ ನಿರತರಾಗಿದ್ದ 21 ಮಂದಿಯನ್ನು ಬಂಧಿಸಿದೆ. ಆರೋಪಿಗಳಿಂದ 18.37 ಲಕ್ಷ ನಗದು ಸೇರಿದಂತೆ 86.47 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ಮೆಲ್ವಿನ್ ವಿಶ್ವಾಸ್ ಡಿ' ಸೋಜಾ, ಶರತ್ಕುಮಾರ್, ಗುರುಪ್ರಸಾದ್, ರಾಜ ಪೂಜಾರಿ, ಮಹಮ್ಮದ್ ಹನೀಫ್, ಶಿವರಾಜ್, ಅನ್ವರ್, ಆದರ್ಶ, ರಾಧಾಕೃಷ್ಣ ನಾಯರ್, ಅರ್ವಿನ್ ಡಿ'ಸೋಜಾ, ಮಹಾದೇವಪ್ಪ, ಕುಮಾರನಾಥ ಶೆಟ್ಟಿ, ಆಲ್ವಿನ್ ರಿಚಾರ್ಡ್, ಗಣೇಶ್ ವಿ.ಎಸ್., ಪ್ರೀತಂ ಪ್ರಶಾಂತ್, ಎ.ಬಿ. ಬಶೀರ್, ಸಾವನ್, ನಿತಿನ್ ಡಿ'ಸೋಜಾ, ಆಬೀದ್ ಹುಸೈನ್, ಡೆಂಝಿಲ್ ವಿಕ್ಸನ್ ಡಿ'ಸೋಜಾ, ಮಹಮ್ಮದ್ ಹನೀಫ್ ಎಂದು ಗುರುತಿಸಲಾಗಿದೆ.
ಜೂಜಿಗೆ ಬಳಸಿದ 18,37,000 ರೂ., 66,75,000 ರೂ. ಮೌಲ್ಯದ 8 ಕಾರು ಮತ್ತು ರಿಕ್ಷಾ, ಹಾಗೂ 1,35,700 ರೂ. ಮೌಲ್ಯದ 24 ಮೊಬೈಲ್ ಸೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾಲಕ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಸಿಬಿ ಸಬ್ ಇನ್ಸ್ಪೆಕ್ಟರ್ ಕಬ್ಬಾಳ್ರಾಜ್ ಮತ್ತು ತಂಡ ಈ ಕಾರ್ಯಾಚರಣೆ ನಡೆಸಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮುಂದಿನ ಕ್ರಮಕ್ಕಾಗಿ ಕಂಕನಾಡಿ ನಗರ ಠಾಣೆ ಪೊಲೀಸರ ವಶಕ್ಕೆ ನೀಡಲಾಗಿದೆ. ವಶಪಡಿಸಿಕೊಂಡ ಸ್ವತ್ತುಗಳನ್ನು ಕಂಕನಾಡಿ ನಗರ ಠಾಣೆ ಸುಪರ್ದಿಗೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.