ಕುಂದಾಪುರ, ಜೂ 14 (DaijiworldNews/DB): ಅನಾರೋಗ್ಯದ ಹಿನ್ನೆಲೆ ಸೋಮವಾರ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಬಿಜೆಪಿಯ ಹಿರಿಯ ಮುಖಂಡ, ಮಾಜಿ ಶಾಸಕ ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ತಾಲೂಕಿನ ಅಮಾಸೆಬೈಲಿನ ಮೃತರ ಸ್ವಗ್ರಹದ ಸಮೀಪದ ತೋಟದಲ್ಲಿ ಮಂಗಳವಾರ ಮಧ್ಯಾಹ್ನ ಜರಗಿತು.
ಸೋಮವಾರ ರಾತ್ರಿ ಮೃತದೇಹವನ್ನು ಅಮಾಸೆಬೈಲಿನಲ್ಲಿರುವ ಅವರ ಮನೆಗೆ ತರಲಾಗಿದ್ದು, ಮಂಗಳವಾರ ಬೆಳಗ್ಗೆ ಮನೆಯ ಸಮೀಪದ ಗೋಕುಲ್ ಗೇರು ಕಾರ್ಖಾನೆಯ ಆವರಣದೊಳಗೆ ಮೃತ ದೇಹವನ್ನು ಇರಿಸಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಎಜಿ ಕೊಡ್ಗಿಯವರ ಅಭಿಮಾನಿಗಳು ಹಾಗೂ ಕುಟುಂಬಿಕರು ಸಾವಿರಾರು ಸಂಖ್ಯೆಯಲ್ಲಿ ದರ್ಶನ ಪಡೆದುಕೊಂಡು ಅಂತಿಮ ನಮನಗಳನ್ನು ಸಲ್ಲಿಸಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಸರ್ಕಾರದ ವತಿಯಿಂದ ಗೌರವ ರಕ್ಷೆ ನೀಡಲಾಯಿತು. ಪೊಲೀಸ್ ಇಲಾಖೆಯ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ವತಿಯಿಂದ ಗಾಳಿಯಲ್ಲಿ 3 ಬಾರಿ ಕುಶಾಲು ತೋಪುಗಳನ್ನು ಸಿಡಿಸಿ ಗೌರವ ರಕ್ಷೆ ನೀಡಲಾಯಿತು. ಮೃತ ದೇಹಕ್ಕೆ ಹೊದಿಸಲಾದ ತ್ರಿವರ್ಣ ಧ್ವಜವನ್ನು ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಕೆ. ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪ್ಚಂದ್ರ ಶೆಟ್ಟಿ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯ್ಕ್, ಜಿಲ್ಲಾ ಎಸ್.ಪಿ ಎನ್. ವಿಷ್ಣುವರ್ಧನ್ ಉಪಸ್ಥಿತರಿದ್ದರು. ಮಧ್ಯಾಹ್ನದ ಬಳಿಕ ಮೃತ ದೇಹವನ್ನು ಮರಳಿ ಮೂಲ ಮನೆಗೆ ಕೊಂಡೊಯ್ದು ಪುರೋಹಿತರ ಮಾರ್ಗದರ್ಶನದಲ್ಲಿ ಅಂತಿಮ ವಿಧಿಗಳನ್ನು ನೆರವೇರಿಸಲಾಯಿತು. ಬಳಿಕ ಮನೆಯ ಸಮೀಪದ ತೋಟದಲ್ಲಿ ನಿರ್ಮಿಸಲಾದ ಚಿತೆಯಲ್ಲಿ ಹಿಂದೂ ಬ್ರಾಹ್ಮಣ ಪದ್ಧತಿಯಂತೆ ಅಗ್ನಿಸ್ವರ್ಶ ಮಾಡಿ ಅಂತ್ಯಕ್ರಿಯೆ ನಡೆಸಲಾಯಿತು.
ಮಕ್ಕಳಾದ ಅಶೋಕಕುಮಾರ ಕೊಡ್ಗಿ, ಕಿಶೋರಕುಮಾರ ಕೊಡ್ಗಿ, ಆನಂದ ಕೊಡ್ಗಿ, ಕುಮಾರ ಕೊಡ್ಗಿ, ಕಿರಣಕುಮಾರ ಕೊಡ್ಗಿ, ಪುತ್ರಿ ಶಶಿ, ಸಹೋದರ ಅನಂತಕೃಷ್ಣ ಕೊಡ್ಗಿ ಹಾಗೂ ಕುಟುಂಬಸ್ಥರು ಪಾಲ್ಗೊಂಡಿದ್ದರು.
ಕೊಡ್ಗಿಯವರ ಕೊಡುಗೆ ದೊಡ್ಡದು-ಸ್ಮರಿಸಿದ ನಾಯಕರು
ಎ.ಜಿ. ಕೊಡ್ಗಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಬಳಿಕ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಈ ನಾಡಿಗೆ ಎಜಿ ಕೊಡ್ಗಿಯವರ ಕೊಡುಗೆ ದೊಡ್ಡದು. ಪಂಚಾಯತ್ ರಾಜ್ ವ್ಯವಸ್ಥೆ ಬಲಪಡಿಸುವಲ್ಲಿ ಅವರ ಪಾತ್ರ ಮಹತ್ತರವಾದುದು ಎಂದು ಸ್ಮರಿಸಿದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ತಮ್ಮ ನೇರ ನಡೆ-ನುಡಿಗಳಿಂದಲೇ ಪಕ್ಷಾತೀತವಾಗಿ ಗುರುತಿಸಿಕೊಂಡಿದ್ದ ಎಜಿ ಕೊಡ್ಗಿಯವರು ಆಸ್ಕರ್ ಫೆರ್ನಾಂಡೀಸ್, ವಿಎಸ್ ಆಚಾರ್ಯರಂತೆಯೇ ಜಿಲ್ಲೆಯ ಆಸ್ತಿಯಾಗಿದ್ದರು ಎಂದರು.
ಮಾಜಿ ಶಾಸಕ ಎಜಿ ಕೊಡ್ಗಿಯವರ ಸಾವು ನಮಗೆಲ್ಲರಿಗೂ ತುಂಬಲಾರದ ನಷ್ಟ. ರಾಜಕೀಯವು ಸೇವೆ ಎಂಬ ಅರ್ಥಕ್ಕೆ ಶಕ್ತಿ ತುಂಬಿದ ಧೀಮಂತ ನಾಯಕ ಅವರು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಕರಾವಳಿಯಲ್ಲಿ ಭಾಜಪವನ್ನು ಕಟ್ಟಿ ಬೆಳೆಸುವಲ್ಲಿ ಎಜಿ ಕೊಡ್ಗಿಯವರ ಪಾತ್ರ ಬಹಳ ಮುಖ್ಯವಾಗಿದೆ. ಜನಪರವಾದ ಅನೇಕ ಯೋಜನೆಗಳನ್ನು ರೂಪಿಸುವಲ್ಲಿ ಕೊನೆತನಕವೂ ಶ್ರಮಿಸಿದ್ದಾರೆ. ಅವರೊಬ್ಬ ಅಭಿವೃದ್ದಿಯ ಕನಸುಗಾರರು ಎಂದು ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.