ಉಡುಪಿ, ಜೂ 14 (DaijiworldNews/DB): ಕಾನೂನು ಎಲ್ಲರಿಗೂ ಒಂದೇ. ಅದನ್ನು ಮೀರಿ ಪ್ರತಿಭಟನೆ ಮಾಡುವಂತಹ ಅಡ್ಡ ಮಾರ್ಗ ಹಿಡಿದಿರುವುದರಿಂದಲೇ ದೇಶದಲ್ಲಿ ಕಾಂಗ್ರೆಸ್ ಪಕ್ಷ ನಾಪತ್ತೆಯಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಕುಟುಂಬಕ್ಕೆ ಇಡಿ ಸಮನ್ಸ್ ನೀಡಿ ವಿಚಾರಣೆ ನಡೆಸುತ್ತಿರುವುದರ ಕುರಿತು ಉಡುಪಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ದೇಶದಲ್ಲಿ ಕಾನೂನು ಕಾಂಗ್ರೆಸ್ ನಾಯಕರಿಗೊಂದು, ಜನಸಾಮಾನ್ಯರಿಗೊಂದು ಅನ್ನುವಂತದ್ದೇನಾದರೂ ಇದೆಯಾ? ಕಾನೂನು ಎಲ್ಲರಿಗೂ ಒಂದೇ. ಕೋರ್ಟ್ ವಿಚಾರಣೆಗೆ ಕರೆ ಕೊಟ್ಟಾಗ ಹೋಗಿ ಹೇಳಿಕೆ ಕೊಟ್ಟು ಬರಬೇಕು. ನಿರಪರಾಧಿ ಆಗಿದ್ದಲ್ಲಿ ಆತ ಹೊರಗೆ ಬರುತ್ತಾನೆ. ಅಪರಾಧಿ ಆಗಿದ್ದರೆ ಶಿಕ್ಷೆ ಅನುಭವಿಸುತ್ತಾನೆ. ಇದನ್ನೂ ಮೀರಿ ಪ್ರತಿಭಟನೆ ಮಾಡುತ್ತಾರೆಂದರೆ, ಈ ನೆಲದ ಮಣ್ಣಿನ ಕಾನೂನು ಅವರಿಗೆ ಅನ್ವಯವಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಈ ರೀತಿ ಅಡ್ಡ ಮಾರ್ಗ ಹಿಡಿದಿರುವುದರಿಂದಲೇ ದೇಶದಲ್ಲಿ ಆ ಪಕ್ಷ ನಾಪತ್ತೆಯಾಗುತ್ತಿದೆ ಎಂದು ಇದೇ ವೇಳೆ ಅವರು ವ್ಯಂಗ್ಯವಾಡಿದರು.
ವಿಧಾನಪರಿಷತ್ನಲ್ಲಿ ಮಂಡಿಸಲ್ಪಡುವ ವಿಧೇಯಕಗಳು ಪ್ರಮುಖವಾಗಿ ಮತಾಂತರ ನಿಷೇಧ ಕಾಯ್ದೆ ಸುಗ್ರೀವಾಜ್ಞೆ ಮಾಡಿದೆ. ವಿಧಾನಸಭೆಯಲ್ಲಿ ಇದು ಈಗಾಗಲೇ ಪಾಸಾಗಿದೆ. ಗೋ ಹತ್ಯೆ ತಡೆ ಕಾಯ್ದೆ ಈಗಾಗಲೇ ಆಗಿದೆ. ಬಿಲ್್ಗಳು ಇನ್ನೂ ಇದ್ದು, ಅವುಗಳ ಪಟ್ಟಿ ಮಾಡಲಾಗುತ್ತಿದೆ ಎಂದರು.
ಉತ್ತರ ಪ್ರದೇಶದಲ್ಲಿ ಬ್ಯುಲ್ಡೋಜರ್ ಅಸ್ತ್ರ ಪ್ರಯೋಗ ಮಾಡಿದಂತೆ ರಾಜ್ಯದಲ್ಲಿ ಮಾಡುವ ಯೋಚನೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕೆ ಅಂತಹ ಸಂದರ್ಭಗಳಿಲ್ಲ. ಉತ್ತರ ಪ್ರದೇಶ ಮತ್ತು ಕರ್ನಾಟಕಕ್ಕೆ ವ್ಯತ್ಯಾಸ ಇದೆ. ಇಲ್ಲಿ ಕಾನೂನು, ಸಂವಿಧಾನ ಅನುಸರಿಸುವ ಮನಸ್ಥಿತಿ ಇದೆ . ಹಾಗಾಗಿ ಅಸ್ತ್ರ ಉಪಯೋಗ ಮಾಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.