ಕಾಸರಗೋಡು, ಜ 14(SM): ಕೇರಳ ಮುಖ್ಯಮಂತ್ರಿಗಳ ವಿರುದ್ಧ ಅವಾಚ್ಯ ಶಬ್ದಗಳನ್ನಾಡಿದ ಯುವತಿಯನ್ನು ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಾಸರಗೋಡು ಜೆ.ಪಿ. ಕಾಲನಿಯ ರಾಜೇಶ್ವರಿ (25) ಎಂದು ಗುರುತಿಸಲಾಗಿದೆ.
ಶಬರಿಮಲೆಗೆ ಯುವತಿಯರ ಪ್ರವೇಶಕ್ಕೆ ಸಂಬಂಧಪಟ್ಟಂತೆ ಶಬರಿಮಲೆ ಸಂರಕ್ಷಾ ಸಮಿತಿ ಮತ್ತು ಸಂಘಪರಿವಾರ ಕರೆ ನೀಡಿದ್ದ ಹರತಾಳದಂದು ಕಾಸರಗೋಡು ನಗರದಲ್ಲಿ ನಡೆಸಿದ ಮೆರವಣಿಗೆ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ವಿರುದ್ಧ ಅವಾಚ್ಯ ಶಬ್ದಗಳಿಂದ ಘೋಷಣೆ ಕೂಗಿದ್ದಳು.
ಜನವರಿ ಮೂರರಂದು ಕರಂದಕ್ಕಾಡ್ ನಿಂದ ಕಾಸರಗೋಡು ಹೊಸ ಬಸ್ಸು ನಿಲ್ದಾಣ ತನಕ ನಡೆದ ಮೆರವಣಿಗೆ ಸಂದರ್ಭದಲ್ಲಿ ಉದ್ರೇಕಕಾರಿ ಹಾಗೂ ಅವಾಚ್ಯ ಶಬ್ದಗಳನ್ನು ಬಳಸಿ ಘೋಷಣೆ ಕೂಗಿದ್ದಳು. ಬಿಜೆಪಿ ಜಿಲ್ಲಾಧ್ಯಕ್ಷ, ಮುಖಂಡರು ಹಾಗೂ ಪೊಲೀಸರ ಸಮ್ಮುಖದಲ್ಲಿ ಘೋಷಣೆ ಕೂಗಲಾಗಿತ್ತು.
ಈ ಬಗ್ಗೆ ರಾಜೇಶ್ವರಿ ವಿರುದ್ಧ ಕಾಸರಗೋಡು ನಗರ ಠಾಣೆಯಲ್ಲಿ ಹಲವು ದೂರುಗಳು ದಾಖಲಾಗಿದ್ದವು. ಘೋಷಣೆ ಕೂಗಿದ ಮಾತ್ರವಲ್ಲ ಈಕೆ ವಿರುದ್ಧ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ, ವಾಹನಗಳನ್ನು ತಡೆದು ಸಂಚಾರಕ್ಕೆ ಅಡ್ಡಿಪಡಿಸಿದ ಪ್ರಕರಣ ಕೂಡ ದಾಖಲಾಗಿದೆ.