ಮಂಜೇಶ್ವರ, ಜೂ 13 (DaijiworldNews/DB): ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸಮೀಪದ ಜೋಡುಕಲ್ಲು ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಟ್ರಾಫಿಕ್ ಪೊಲೀಸ್ ಎಸ್ ಐ ಹಾಗೂ ಸಿಬ್ಬಂದಿಗಳನ್ನು ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ, ಶಾಸಕ ಆವಾಸ್ ಗೆ ಪೊಲೀಸರು ಮಾತ್ರ ಯಾವುದೇ ಸೊಪ್ಪು ಹಾಕಿಲ್ಲ.
ಸಾಮಾನ್ಯವಾಗಿ ಅಧಿಕಾರಿಗಳು ಜನಪ್ರತಿನಿಧಿಗಳ ಹಿಡಿತದಲ್ಲಿರುತ್ತಾರೆ ಎನ್ನುವುದನ್ನು ನಾವು ಗಮಿಸಿದ್ದೇವೆ. ಆದರೆ, ಈ ಪ್ರಕರಣದಲ್ಲಿ ಜನಪ್ರತಿನಿಧಿ, ಶಾಸಕರ ಪವರ್ ಯಾವುದೇ ರೀತಿಯಲ್ಲಿ ವರ್ಕೌಟ್ ಆಗಿಲ್ಲ. ಮಂಜೇಶ್ವರದ ಜೋಡುಕಲ್ಲು ಎಂಬಲ್ಲಿ ವಾಹನ ತಪಾಸಣೆ ನಡೆಸುವ ಪೊಲೀಸರನ್ನು ಶಾಸಕರು ತರಾಟೆಗೆತ್ತಿಕೊಂಡರು. ಈ ವೇಳೆ ಶಾಸಕರಿಗೆ ಉತ್ತರಿಸಿದ ಎಸ್ ಐ ನಾನು ನನ್ನ ಕರ್ತವ್ಯ ಮಾಡುತ್ತಿದ್ದೇನೆ. ಲೈಸನ್ಸ್ ಇಲ್ಲದೆ ಸಂಚರಿಸುವವರನ್ನು ತಡೆದಿದ್ದೇನೆ ಎಂದು ಶಾಸಕರಿಗೆ ಸರಿಯಾದ ರೀತಿಯಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ.
ಅಲ್ಲದೆ, ಇದೇ ಸಂದರ್ಭದಲ್ಲಿ ಸಾರ್ವಜನಿಕರನ್ನು ಕಳುಹಿಸಲು ಶಾಸಕರು ಯತ್ನಿಸಿದ್ದು, ಆ ಸಂದರ್ಭದಲ್ಲಿ ನೀವು ನನಗೆ ಏನು ಮಾಡುತ್ತೀರಿ? ಹೊಡೆಯೂವುದಾದರೆ ಹೊಡೆಯಿರಿ ಎಂದು ಶಾಸಕರಿಗೆ ಮರು ಉತ್ತರ ನೀಡಿದ್ದಾರೆ. ಈ ಎಲ್ಲಾ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.