ಉಡುಪಿ, ಜ 14 (MSP): ಜಿಲ್ಲೆಯಲ್ಲಿ ಮೃತಪಟ್ಟ ಮಂಗಗಳ ಅಂಗಾಂಗ ಮಾದರಿಯ ಪರೀಕ್ಷಾ ವರದಿ ಸೋಮವಾರ ಸಿಗುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಆರಂಭಿಕ ಹಂತದಲ್ಲಿ ಶಿವಮೊಗ್ಗ ಪ್ರಯೋಗಾಲಯಕ್ಕೆ ಮಾದರಿಯನ್ನು ಕಳುಹಿಸಲಾಗಿದ್ದು, ಅಲ್ಲಿ ಪ್ರಾಣಿಗಳ ಮಾದರಿ ಪರೀಕ್ಷಾ ವ್ಯವಸ್ಥೆ ಇಲ್ಲದ ಕಾರಣ ಪುಣೆ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು.
ಈ ಮಧ್ಯೆ ಶಂಕಿತ ಮಂಗನಕಾಯಿಲೆ ಸಂಬಂಧ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಶಿವಮೊಗ್ಗ ಜಿಲ್ಲೆಯ ಸಾಗರ ಅಸುಪಾಸಿನ 19 ಮಂದಿಗೆ ಚಿಕಿತ್ಸೆ ಮುಂದುವರಿದಿದೆ. ಇದುವರೆಗೆ ಆಸ್ಪತ್ರೆಗೆ ದಾಖಲಾದ 69 ಮಂದಿ ಪೈಕಿ ೨೫ ಮಂದಿಗೆ ಮಂಗನ ಕಾಯಿಲೆ ಧೃಡಪಟ್ಟಿದೆ. ಒಟ್ಟು 50 ಮಂದಿ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿದ್ದಾರೆ ಎಂದು ಕೆಎಂಸಿ ಆಸ್ಪತ್ರೆಯ ಅಧಿಕೃತ ಮೂಲಗಳು ತಿಳಿಸಿವೆ.
ಕುಂದಾಪುರದಲ್ಲಿ ೧೫ ಕೋತಿಗಳು ಮೃತಪಟ್ಟಿದ್ದು, ಕಾರ್ಕಳ ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿ ಕೋತಿಗಳು ಮೃತಪಟ್ಟ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ದೊರಕಿತ್ತು.