ಕಾಸರಗೋಡು, ಜ 14 (MSP): ಡಾ. ಪ್ರಭಾಕರ ಭಟ್ ಕಲ್ಲಡ್ಕ ಸಹಿತ ಕೆಲವು ಆರ್ಎಸ್ಎಸ್ ಮುಖಂಡರ ಹತ್ಯೆಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಸರಗೋಡು ಚೆಮ್ನಾಡ್ ಸಮೀಪದ ಚೆಂಬರಿಕೆ ನಿವಾಸಿ, ಸಿ ಎಂ ಮುಹತಸಿಂ ಅಲಿಯಾಸ್ ತಾಸಿಂ (41೧)ನನ್ನು ನವದೆಹಲಿ ಪೊಲೀಸರು ಬಂಧಿಸಿದ್ದಾರೆ.
ಉಗ್ರರೊಂದಿಗೆ ಸಂಪರ್ಕ ಹಾಗೂ ಆರ್ಎಸ್ಎಸ್ ಮುಖಂಡರ ಹತ್ಯೆಗೆ ಸ್ಕೆಚ್ ಹಾಕುವಲ್ಲಿ ಮುಹತಾಸಿಂ ಪ್ರಮುಖ ಪಾತ್ರ ವಹಿಸಿರುವ ಅನುಮಾನಗಳಿದ್ದು, ರಹಸ್ಯ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಿ, ಕಾಸರಗೋಡು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟರ್ ಮುಂದೆ ಹಾಜರುಪಡಿಸಿದ ಬಳಿಕ ದೆಹಲಿಗೆ ಕರೆದೊಯ್ಯಲಾಗಿದೆ.
ಆರ್ಎಸ್ಎಸ್ ಮುಖಂಡರ ಹತ್ಯೆಗೆ ಸಂಚು ನಡೆಯುತ್ತಿರುವ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆಗೆ ಮಾಹಿತಿ ಲಭಿಸಿದ ಬೆನ್ನಲ್ಲೇ ಕಾಸರಗೋಡಿಗೆ ಬಂದ ದೆಹಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿರುವುದು ಗಮನಾರ್ಹ ಸಂಗತಿಯಾಗಿದೆ. ಆದರೆ, ಈ ಬಗ್ಗೆ ವಿವರ ನೀಡಲು ಸ್ಥಳೀಯ ಠಾಣೆ ಪೊಲೀಸರು ಹಾಗೂ ದೆಹಲಿ ಪೊಲೀಸರು ನಿರಾಕರಿಸಿದ್ದಾರೆ.
ಮುಹತಂಸಿ ವಿರುದ್ದ ಬೇಕಲ ಪೊಲೀಸ್ ಠಾಣೆಯಲ್ಲಿ 2 ನಕಲಿ ಪಾಸ್ ಪೋರ್ಟ್ ಪ್ರಕರಣ, ಮನೆಗೆ ನುಗ್ಗಿ ಹಲ್ಲೆ ಮತ್ತು ಬೇಕಲದಲ್ಲಿ ಎಸ್ ಐ ಯಾಗಿದ್ದ ವಿಪಿನ್ ಅವರಿಗೆ ಬೆದರಿಕೆ ಕೇಸು ಕೂಡಾ ದಾಖಲಾಗಿದೆ. ಇದಲ್ಲದೆ ಕಾಶ್ಮೀರ ಉಗ್ರಗಾಮಿ ಸಂಘಟನೆಗಳಿಗೆ ಯುವಕರ ನೇಮಕಾತಿ ವಿಚಾರಕ್ಕೆ ಸಂಬಂಧಿಸಿ ಇಂಟರ್ ಪೋಲ್ ಮತ್ತು ಕೇಂದ್ರ ಗುಪ್ತಚರ ವಿಭಾಗ ಕೂಡಾ ಈತನನ್ನು ಈ ಹಿಂದೆ ಹಲವು ಬಾರಿ ವಿಚಾರಣೆ ನಡೆಸಿತ್ತು. ಕಾಸರಗೋಡಿನಲ್ಲಿ ಈತ ಡಾನ್ ಎಂದೇ ಗುರುತಿಸಿಕೊಂಡಿದ್ದಾನೆ.