ಉಪ್ಪಿನಂಗಡಿ, ಜೂ 13 (DaijiworldNews/HR): ಬಿ.ಸಿ.ರೋಡು -ಅಡ್ಡಹೊಳೆ ಚತುಷ್ಪಥ ಕಾಮಗಾರಿಯ ಅವಾಂತರದಿಂದಾಗಿ ಮೊದಲ ಭಾರೀ ಮಳೆಗೆ ಉಪ್ಪಿನಂಗಡಿ ಭಾಗದಲ್ಲಿ ರಸ್ತೆ ಜಲಾವೃತಗೊಂಡು ಅಂಗಡಿ, ಕೃಷಿ ತೋಟಗಳಿಗೆ ನೀರು ನುಗ್ಗಿದ್ದು, ಹೆದ್ದಾರಿ ಅಗಲ ಕಾಮಗಾರಿ ಸಂದರ್ಭ ಇದ್ದ ಚರಂಡಿಗಳನ್ನೆಲ್ಲ ಮುಚ್ಚಿದ್ದರಿಂದ ಮಳೆ ನೀರು ಸರಾಗವಾಗಿ ಹರಿಯದೇ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ ಎನ್ನಲಾಗಿದೆ.
34 ನೆಕ್ಕಿಲಾಡಿ ಗ್ರಾಮದ ಬೊಳ್ಳಾರು, ಬಜತ್ತೂರು ಗ್ರಾಮದ ಕಾಂಚನ ಕ್ರಾಸ್ ಸಮೀಪದ ಬಾರಿಕೆ, ಉಪ್ಪಿನಂಗಡಿ ಗ್ರಾಮದ ಮಠ ಎಂಬಲ್ಲಿ ಮಂಗಳೂರು- ಬೆಂಗಳೂರು ರಾ. ಹೆದ್ದಾರಿ ಜಲಾವೃತಗೊಂಡಿದ್ದು, ಹೆದ್ದಾರಿಯಿಂದ ನಟ್ಟಿಬೈಲು ಸಂಪರ್ಕಿಸುವ ಅಡ್ಡ ರಸ್ತೆ, ಕೃಷಿ ಭೂಮಿಗಳು ಜಲಾವೃತಗೊಂಡಿದೆ.
ಇನ್ನು ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ ಸಮೀಪದ ಸತೀಶ್ ನಾಯಕ್ ಅವರ ಅಂಗಡಿ ಗೋಡೌನ್, ಅಶ್ವಿನಿ ಎಲೆಕ್ಟ್ರಿಕಲ್ಸ್ನ ನೆಲಸಾಮಗ್ರಿಗಳು ಹಾನಿಗೀಡಾಗಿವೆ.
ಭಾರೀ ಮಳೆಯಿಂದ ಪೆರಿಯಡ್ಕದಲ್ಲಿ ಚಂದ್ರ ಗೌಡ ಅವರ ಮನೆ ಬಳಿ ಸೇರಿದಂತೆ ಹಲವು ಕಡೆ ಧರೆ ಕುಸಿತ ಸಂಭವಿಸಿದ್ದು, ಮಠ ಎಂಬಲ್ಲಿ ವಸತಿ ಸಮುಚ್ಚಯ ಜಲಾವೃತಗೊಂಡಿದೆ.