ಕಾಸರಗೋಡು, ಜೂ 13 (DaijiworldNews/HR): ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿರಂತರ ಕಳ್ಳತನ ನಡೆಯುತ್ತಿದ್ದರೂ ಆರೋಪಿಗಳನ್ನು ಬಂಧಿಸಲು ಹಾಗೂ ತಡೆಗೆ ಕ್ರಮ ತೆಗೆದುಕೊಳ್ಳಲು ಮುಂದಾಗದೆ ವಾಹನ ತಪಾಸಣೆ ಹೆಸರಲ್ಲಿ ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿರುವುದರ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.
ವಾಹನಗಳನ್ನು ನಿಲ್ಲಿಸಿ ಗಂಟೆಗಟ್ಟಲೆ ವಿಚಾರಣೆ ನಡೆಸಿ ತೊಂದರೆ ಕೊಡಲಾಗುತ್ತಿದೆ ಎಂಬ ಆರೋಪಿ ಕೇಳಿ ಬರುತ್ತಿದ್ದು, ಈ ನಡುವೆ ಕಳೆದ ದಿನ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅವರು ಜೋಡುಕಲ್ಲು ಎಂಬಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬರುತ್ತಿದ್ದಾಗ ಕಿರಿದಾದ ಹಾಗೂ ತಿರುವು ರಸ್ತೆಯೊಂದರಲ್ಲಿ ವಾಹನಗಳನ್ನು ನಿಲ್ಲಿಸಿ ಪ್ರಯಾಣಿಕರಿಂದ ಸುಲಿಗೆ ನಡೆಸುತ್ತಿರುವುದನ್ನು ಗಮನಿಸಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಕಾರ್ಯಕ್ರಮ ನಡೆಯುತ್ತಿದ್ದ ಸಭಾಂಗಣದ ಮುಂಭಾಗದ ತಿರುವು ರಸ್ತೆಯಲ್ಲಿ ವಾಹನ ತಡೆದು ತಪಾಸಣೆ ನಡೆಸುತ್ತಿರುವನ್ನು ಶಾಸಕರು ಪ್ರಶ್ನಿಸಿದ್ದು, ಸಂಚಾರಕ್ಕೆ ಅಡ್ಡಿ ಮಾತ್ರವಲ್ಲ, ಅಪಘಾತ ವಲಯವಾದುದರಿಂದ ಈ ಸ್ಥಳದಲ್ಲೇ ತಪಾಸಣೆ ನಡೆಸುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುವದನ್ನು ಗಮನಿಸಿದ ಶಾಸಕರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ನಿಗಧಿತ ಸ್ಥಳದಲ್ಲಿ ತಪಾಸಣೆ ನಡೆಸದೆ ತಿರುವು, ಕಿರಿದಾದ, ಜನನಿಬಿಡ ರಸ್ತೆಗಳಲ್ಲಿ ವಾಹನ ತಪಾಸಣೆ ನಡೆಸಿ ಸಾರ್ವಜನಿಕರಿಗೆ ಕಿರುಕುಳ ನೀಡುವುದರ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದ್ದು, ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಒಂದೂವರೆ ಅವಧಿಯಲ್ಲಿ ಹಾಡಹಗಲೇ ಸೇರಿದಂತೆ ಹತ್ತಕ್ಕೂ ಅಧಿಕ ಕಳವು ಪ್ರಕರಣಗಳು ನಡೆದಿದ್ದರೂ ಕ್ರಮ ತೆಗೆದುಕೊಳ್ಳಲು ಮುಂದಾಗದ ಪೊಲೀಸರು ಸಾರ್ವಜನಿಕರಿಗೆ ಅನಗತ್ಯ ತೊಂದರೆ ಕೊಡುತ್ತಿರುವ ಬಗ್ಗೆ ಆಕ್ರೋಶ ಉಂಟಾಗಿದ್ದು, ಪೊಲೀಸರ ಗಮನಕ್ಕೆ ತರುವುದಾಗಿ ಶಾಸಕರು ತಿಳಿಸಿದ್ದಾರೆ.