ಉಳ್ಳಾಲ, ಜೂ 12 (DaijiworldNews/SM): ತಲಪಾಡಿ ದೇವಿನಗರದ ಶಾರದಾ ವಿದ್ಯಾನಿಕೇತನದಲ್ಲಿ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವಿದ್ಯಾಸಂಸ್ಥೆ, ಪ್ರಾಂಶುಪಾಲರು ಹಾಗೂ ಹಾಸ್ಟೆಲ್ ವಾರ್ಡನ್ ವಿರುದ್ಧ ದೂರು ದಾಖಲಿಸಲಾಗಿದೆ.
ತಾಯಿ ಹುಟ್ಟುಹಬ್ಬಕ್ಕೆ ಶುಭಾಷಯ ಹೇಳಲು ವಿದ್ಯಾರ್ಥಿಗೆ ಮೊಬೈಲ್ ನೀಡದ ಹಿನ್ನೆಲೆಯಲ್ಲಿ ನೊಂದು ಆತ್ಮಹತ್ಯೆ ನಡೆಸಿರುವುದಾಗಿ ಆರೋಪಿಸಿದ್ದಾರೆ. ಬೆಂಗಳೂರು ಹೊಸಕೋಟೆ ನಿವಾಸಿ ರಮೇಶ್ ಹಾಗೂ ಮಂಜುಳಾ ದಂಪತಿ ಪುತ್ರ ಪೂರ್ವಜ್(14) ಆತ್ಮಹತ್ಯೆಗೈದ ವಿದ್ಯಾರ್ಥಿ. ಜೂ.11ರಂದು ರಾತ್ರಿ 12ರ ನಂತರ ಹಾಸ್ಟೆಲ್ ರೂಮಿನ ರ್ಯಾಕ್ ನ ರಾಡಿಗೆ ನೈಲಾನ್ ಹಗ್ಗದ ಮೂಲಕ ನೇಣುಬಿಗಿದು ಆತ್ಮಹತ್ಯೆ ನಡೆಸಿದ್ದಾರೆ.
ಈ ಬಗ್ಗೆ ವಿದ್ಯಾರ್ಥಿಯೋರ್ವ ಪ್ರಕರಣವನ್ನು ಗಮನಿಸಿ ಹಾಸ್ಟೆಲ್ ಅಧಿಕೃತರಲ್ಲಿ ಮಾಹಿತಿ ನೀಡಿದ್ದಾನೆ. ಬಳಿಕ ಮೃತ ವಿದ್ಯಾರ್ಥಿ ಪೂರ್ವಜ್ ತಾಯಿ ಸಹೋದರ ಅರುಣ್ ಎಂಬವರಿಗೆ ಪೊಲೀಸರು ಪ್ರಕರಣ ನಡೆದಿರುವುದನ್ನು ಗಮನಕ್ಕೆ ತಂದಿದ್ದಾರೆ. ಬೆಂಗಳೂರಿನಿಂದ ಸಂಜೆ ವೇಳೆ ಆಗಮಿಸಿದ ಹೆತ್ತವರು ಶಾಲಾ ಆಡಳಿತ ಮಂಡಳಿಯ ಕಿರುಕುಳದಿಂದಲೇ ಪೂರ್ವಜ್ ಆತ್ಮಹತ್ಯೆ ನಡೆಸಿದ್ದಾನೆ. ಹಣದಾಸೆಗೆ ಮಾತ್ರ ಶಿಕ್ಷಣ ಸಂಸ್ಥೆಯವರು ನಡೆಸುತ್ತಿದ್ದಾರೆ. ಶಾಲಾ ಸೇರ್ಪಡೆ ವೇಳೆ ವಿದ್ಯಾರ್ಥಿ ಚಲನವಲನವನ್ನು ಪೋಷಕರಿಗೆ ತಿಳಿಸುತ್ತೇನೆ ಅಂದಿದ್ದರೂ ಈವರೆಗೆ ಪೂರ್ವಜ್ ಕುರಿತು ಯಾವುದೇ ಮಾಹಿತಿಯನ್ನು ನೀಡಿಲ್ಲ. ಹೆತ್ತವರು ಕರೆ ಮಾಡಿದರೂ ಸಂಭಾಷಣೆಗೆ ಶಾಲಾಡಳಿತ ಮಂಡಳಿ ಅವಕಾಶ ನೀಡುತ್ತಿರಲಿಲ್ಲ. ಜು.೧೧ ರಂದು ತಾಯಿ ಮಂಜುಳಾ ಅವರ ಹುಟ್ಟುಹಬ್ಬವಿದ್ದು, ಅದಕ್ಕಾಗಿ ಶೂಭಾಷಯ ಕೋರಲು ಮೊಬೈಲ್ ನೀಡದೇ ಇರುವುದರಿಂದ ನೊಂದು ಬಾಲಕ ಪೂರ್ವಜ್ ಆತ್ಮಹತ್ಯೆ ನಡೆಸಿದ್ದಾನೆ ಎಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ತಾಯಿ ಮಂಜುಳಾ ದೂರು ದಾಖಲಿಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.