ಉಡುಪಿ, ಜೂ 12 (DaijiworldNews/HR): ಯಕ್ಷಗಾನ ಕಲಾರಂಗ(ರಿ.) ಉಡುಪಿ ಯಕ್ಷನಿಧಿ, ವಿದ್ಯಾ ಪೋಷಕ್, ಯಕ್ಷ ಶಿಕ್ಷಣ ಸಂಸ್ಥೆ ಯ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿಗಳಾದ ಬಾರ್ಕೂರು ಕೋಟೆಕೆರೆಯ ಶಾಂತಾ ಹಾಗೂ ಶೇಖರ ಮರಕಾಲ, ಇವರ ಮಕ್ಕಳಾದ ಶರತ್ ಕುಮಾರ್ (ಸಿಎ ವಿದ್ಯಾರ್ಥಿ) ಮತ್ತು ಜ್ಞಾನೇಶ್ ಕುಮಾರ್ (ಅಂತಿಮ ಇಂಜಿನಿಯರಿಂಗ್) ಇವರಿಗೆ, ಉಡುಪಿಯಲ್ಲಿ ಲೆಕ್ಕ ಪರಿಶೋಧಕರಾಗಿರುವ ಸಿಎ ಗಣೇಶ್ ಕಾಂಚನ್ ಪ್ರಾಯೋಜಕತ್ವದಲ್ಲಿ ನಿರ್ಮಿಸಲಾದ 'ಗಣೇಶ ಕೃಪಾ' ನೂತನ ಮನೆಯನ್ನು ಇಂದು ಗಣೇಶ್ ಕಾಂಚನ್ ಮತ್ತು ಪ್ರಫುಲ್ಲಾ ಜಿ. ಕಾಂಚನ್ ದಂಪತಿಗಳು ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ಫಲಾನುಭವಿಗೆ ಹಸ್ತಾಂತರಿಸಲಾಯಿತು.
ಉದ್ಘಾಟಕರಾದ ಗಣೇಶ್ ಕಾಂಚನ್ ಮಾತನಾಡಿದ ಅವರು, 'ಕೃತಜ್ಞತಾಭಾವ ಬದುಕಿನಲ್ಲಿ ರೂಢಿಸಿಕೊಳ್ಳಲೇಬೇಕಾದ ಮಹತ್ವದ ಗುಣ. ಕಷ್ಟದಲ್ಲಿದ್ದಾಗ ಬೇರೆಯವರು ಸಹಾಯ ಮಾಡಿದ್ದನ್ನು ಮರೆಯದೆ ನಾವು ಒಳ್ಳೆಯ ಸ್ಥಿತಿಗೆ ಬಂದಾಗ ಸಮಾಜದಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡುವ ಮೂಲಕ ಋಣ ಸಂದಾಯ ಮಾಡಬೇಕು. ಏರಿದ ಏಣಿ ದಾಟಿದ ದೋಣಿಯನ್ನು ಮರೆಯಬಾರದು ಎಂದು ನುಡಿದರು.
ಅಭ್ಯಾಗತರಾಗಿ ಭಾಗವಹಿಸಿದ ಶೆಟ್ಟಿಗಾರ್ ಇಂಡಸ್ಟ್ರೀಸ್ನ ಮಾಲಕರಾದ ಶ್ರೀನಿವಾಸ ಶೆಟ್ಟಿಗಾರ್ ಮಾತನಾಡಿ, 'ಯಕ್ಷಗಾನ ಕಲಾರಂಗದ ಸಮಾಜಮುಖೀ ಕಾರ್ಯಕ್ಕೆ ತಾನು ಸಹಕರಿಸುವುದಾಗಿ ಭರವಸೆ ನೀಡಿದರು.
ಇದು ಸಂಸ್ಥೆಯು ದಾನಿಗಳ ನೆರವಿನಿಂದ ನಿರ್ಮಿಸಿಕೊಟ್ಟ 29ನೇ ಮನೆಯಾಗಿದ್ದು, ಈ ತಿಂಗಳಿನಲ್ಲಿ ಇನ್ನೂ 6 ಮನೆಗಳು ಉದ್ಘಾಟನೆಗೊಳ್ಳಲಿವೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತ ಭಾಷಣದಲ್ಲಿ ತಿಳಿಸಿದರು.
ಯು. ವಿಶ್ವನಾಥ ಶೆಣೈ, ರಾಜಗೋಪಾಲ ಆಚಾರ್ಯ, ತುಳಸೀದಾಸ್ ಕಾಂಚನ್, ವಸಂತ ಕಾಂಚನ್, ಸಂಸ್ಥೆಯ ಉಪಾಧ್ಯಕ್ಷರಾದ ಎಸ್. ವಿ. ಭಟ್, ವಿ.ಜಿ. ಶೆಟ್ಟಿ, ಕೋಶಾಧಿಕಾರಿಗಳಾದ ಮನೋಹರ್ ಕೆ., ಪ್ರೊ. ಕೆ. ಸದಾಶಿವ ರಾವ್ ಹಾಗೂ ಸಂಸ್ಥೆಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರೊ. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.