ಮಂಗಳೂರು, ಜೂ 12 (DaijiworldNews/DB): ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯು 1,039 ಎಕರೆಗೂ ಹೆಚ್ಚು ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಮುಂದಾಗಿರುವುದನ್ನು ವಿರೋಧಿಸಿ ಬಳ್ಕುಂಜೆ, ಕೊಲ್ಲೂರು ಮತ್ತು ಉಳೆಪಾಡಿ ಗ್ರಾಮಸ್ಥರು ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.
ಈ ಗ್ರಾಮದ ಜನರ ಮುಖ್ಯ ವೃತ್ತಿ ಕೃಷಿಯಾಗಿದ್ದು, ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಪ್ರದೇಶದಲ್ಲಿ ಹೆಚ್ಚಿನ ಪಾಲು ಕೃಷಿ ಭೂಮಿಯೇ ಇದೆ. ಇದರಿಂದ ಗ್ರಾಮಸ್ಥರು ಆತಂಕಿತರಾಗಿದ್ದು, ಪ್ರತಿಭಟನೆಯ ದಾರಿ ಹಿಡಿದಿದ್ದಾರೆ. ಸುಮಾರು 170ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದಾರೆ. ಮಂಡಳಿಯು ಜಾಗ ಸ್ವಾಧೀನಕ್ಕೆ ಮುಂದಾಗಿರುವ ವಿಚಾರ ಗ್ರಾಮಸ್ಥರಿಗೆ ತಡವಾಗಿ ಗೊತ್ತಾಗಿದ್ದು, ಯಾವುದೇ ಮಾಹಿತಿಯನ್ನು ಮುಂಚಿತವಾಗಿ ನೀಡಿರಲಿಲ್ಲ. ಮಂಡಳಿಯ ಈ ನಿರ್ಧಾರವನ್ನು ವಿರೋಧಿಸಿ ಮತ್ತು ಇಡೀ ಪ್ರದೇಶವನ್ನು ಕೈಗಾರಿಕೆ ಸ್ಥಾಪನೆಗೆ ಬಳಕೆ ಮಾಡುವುದನ್ನು ಖಂಡಿಸಿ ಗ್ರಾಮಸ್ಥರು ಬೀದಿಗಿಳಿದಿದ್ದಾರೆ.
ಇದೀಗ ಕೆಐಎಡಿಬಿಯು ಎಲ್ಲಾ ಕುಟುಂಬಗಳಿಗೆ ನೊಟೀಸ್ ನೀಡಿದ್ದು ಮನೆಗಳನ್ನು ಮತ್ತು ಕೃಷಿ ಭೂಮಿಗಳನ್ನು ಬಿಟ್ಟು ಹೊರಡುವಂತೆ ಸೂಚಿಸಿದೆ. ಆದರೆ ತಲೆಮಾರಿನಿಂದ ಬಂದಿರುವ ತಮ್ಮ ಭೂಮಿಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಗ್ರಾಮಸ್ಥರು ಪ್ರಸ್ತುತ ಅಸಹಾಯಕರಾಗಿದ್ದು, ಹೋರಾಟಕ್ಕಿಳಿದಿದ್ದಾರೆ.
ಕೊರಗ ಸಮುದಾಯದವರು ಇಲ್ಲಿ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ. ಅಲ್ಲದೇ ಧಾರ್ಮಿಕ ಸ್ಥಳಗಳೂ ಇವೆ. 42 ದೇವಸ್ಥಾನ, 10 ದೈವಸ್ಥಾನಗಳೂ ಇಲ್ಲಿವೆ. ಬಳ್ಕುಂಜೆಯ ದೈವಸ್ಥಾನದಲ್ಲಿ ಕೊರಗ ಸಮುದಾಯದವರು ಪ್ರತಿವರ್ಷ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಿದ್ದಾರೆ.
ಈ ಕುರಿತು ಡೈಜಿವರ್ಲ್ಡ್ ಜೊತೆ ಮಾತನಾಡಿದ ಬಳ್ಕುಂಜೆ ಸೈಂಟ್ ಪೌಲ್ಸ್ ಚರ್ಚ್ನ ಪಾಸ್ಟೊರಲ್ ಕಮಿಟಿಯ ಉಪಾಧ್ಯಕ್ಷ ಫ್ರೀಡಾ ರೋಡ್ರಿಗಸ್, ಇಂತಹ ಸಂದರ್ಭಕ್ಕೆ ಸಾಕ್ಷಿಯಾಗುತ್ತಿರುವುದು ನೋವು ತಂದಿದೆ. ಮೂರೂ ಗ್ರಾಮದ ಗ್ರಾಮಸ್ಥರು ಕೃಷಿಯನ್ನೇ ನೆಚ್ಚಿಕೊಂಡು ಬದುಕುತ್ತಿದ್ದಾರೆ. ರಬ್ಬರ್, ತೆಂಗಿನಕಾಯಿ ಮುಂತಾದ ಕೃಷಿಯೊಂದಿಗೆ ಇಲ್ಲಿನ ಜನರಿಗೆ ಅವಿನಾಭಾವ ಸಂಬಂಧವಿದೆ. 1,039 ಎಕರೆ ಕೃಷಿಭೂಮಿಯನ್ನು ಕೈಗಾರಿಕೆ ಉದ್ದೇಶಕ್ಕೆ ಬಳಸಿಕೊಳ್ಳಲು ಸ್ವಾಧೀನಪಡಿಸಿಕೊಳ್ಳುವುದು ಸರಿಯಲ್ಲ. ಜನರಿಗೆ ತಮ್ಮ ತಲೆತಲಾಂತರದಿಂದ ಬಂದ ಕೃಷಿ ಭೂಮಿಯನ್ನು ಬಿಟ್ಟು ಕೊಡುವುದು ಸಾಧ್ಯವೂ ಇಲ್ಲ. ಸ್ವಾಧೀನದ ಕುರಿತು ಶಾಸಕರಾಗಲೀ, ಯಾರೂ ಮಾಹಿತಿಯನ್ನೂ ನೀಡಿಲ್ಲ. ಸಚಿವ ಮುರುಗೇಶ್ ನಿರಾಣಿಯವರಿಗೆ ಇತ್ತೀಚೆಗೆ ಮನವಿಯೊಂದನ್ನು ನಾವೆಲ್ಲರೂ ಸಲ್ಲಿಸಿದ್ದು, ಅದನ್ನು ಅವರು ಸ್ವೀಕರಿಸಿಲ್ಲ ಎಂದು ತಿಳಿಸಿದರು.
ಕೃಷಿ ಭೂಮಿ ಸ್ವಾಧೀನಪಡಿಸಿಕೊಂಡರೆ ಮೂರೂ ಗ್ರಾಮಗಳ ಜನರು ದೊಡ್ಡ ತೊಂದರೆ ಅನುಭವಿಸುತ್ತಾರೆ. ಅವರಿಗೆ ಬೇರೆಲ್ಲೂ ಹೋಗಲು ಸ್ಥಳವಿಲ್ಲ. ಕೆಐಎಡಿಬಿಯ ಈ ನಿರ್ಧಾರ ಸ್ವಾಗತಾರ್ಹವಲ್ಲ ಎಂದು ಚರ್ಚ್ ಧರ್ಮಗುರು ಫಾ. ಗಿಲ್ಬರ್ಟ್ ಡಿಸೋಜ ತಿಳಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತಾ ಪೂಂಜ, ನಾವು ಗ್ರಾಮಸ್ಥರ ಜೊತೆಗೆ ನಿಲ್ಲುತ್ತೇವೆ. ಯಾವುದೇ ಕಾರಣಕ್ಕೂ ಭೂ ಸ್ವಾಧೀನಕ್ಕೆ ಅವಕಾಶ ಕೊಡುವುದಿಲ್ಲ. ನಮಗೆ ಕೆಐಎಡಿಬಿಯಿಂದ ಈ ನಿರ್ಧಾರದ ಕುರಿತು ಯಾವುದೇ ಮಾಹಿತಿ ಇರಲಿಲ್ಲ. ದಿಢೀರ್ ಆಗಿ ಮನೆ ಮತ್ತು ಕೃಷಿ ಭೂಮಿ ಖಾಲಿ ಮಾಡುವಂತೆ ಎಲ್ಲಾ ಕುಟುಂಬಗಳಿಗೆ ನೊಟೀಸ್ ನೀಡಿದಾಗಲೇ ವಿಚಾರ ಗೊತ್ತಾಗಿದೆ. ಇದನ್ನು ಖಂಡಿಸಿ ನಾವು ಪ್ರತಿಭಟನೆ ಮುಂದುವರಿಸುತ್ತೇವೆ ಎಂದಿದ್ದಾರೆ.