ಮಂಗಳೂರು, ಜೂ 12 (DaijiworldNews/DB): ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ಬಳಿ ಪೌರ ಕಾರ್ಮಿಕರಿಗೆಂದು ಮೀಸಲಿಟ್ಟ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡ ಮನೆಗಳನ್ನು ತೆರವುಗೊಳಿಸಲು ಶನಿವಾರ ಸ್ಥಳಕ್ಕೆ ತೆರಳಿದ ಪಾಲಿಕೆ ಅಧಿಕಾರಿಗಳಿಗೆ ಸ್ಥಳೀಯರೇ ತಡೆಯೊಡ್ಡಿದ ಘಟನೆ ಶನಿವಾರ ನಡೆದಿದೆ. ಅಡ್ಡಿಪಡಿಸಿದ ಮೂವರ ವಿರುದ್ದ ದೂರು ದಾಖಲಿಸಲಾಗಿದೆ.
ಮನೆಯೊಳಗಡೆ ಮಹಿಳೆಯರು ಮತ್ತು ಮಕ್ಕಳನ್ನು ಮಲಗಿಸಿ ಕಾರ್ಯಾಚರಣೆಗೆ ಅಡ್ಡಿಪಡಿಸಲಾಯಿತು. ಸ್ಥಳೀಯರೊಂದಿಗೆ ಕಾರ್ಪೋರೇಟರ್ ಸಂಗೀತಾ ನಾಯಕ್ ಕೂಡಾ ತೆರವು ಕಾರ್ಯಾಚರಣೆಗೆ ಅಡ್ಡಿ ಪಡಿಸಿದರು. ಹೀಗಾಗಿ ತೆರವು ಕಾರ್ಯಾಚರಣೆ ನಡೆಸದೆ ಅಧಿಕಾರಿಗಳು ವಾಪಸ್ಸಾಗಬೇಕಾಯಿತು. ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಮೂವರ ಮೇಲೆ ದೂರು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಇದೇ ವೇಳೆ ತಿಳಿಸಿದ್ದಾರೆ.
ಪೌರ ಕಾರ್ಮಿಕರಿಗೆಂದು ಮೀಸಲಿಟ್ಟ ಜಾಗದಲ್ಲಿ ಶೇ. 25ರಷ್ಟು ಪೌರ ಕಾರ್ಮಿಕರು ಮನೆ ಕಟ್ಟಿಕೊಂಡು ವಾಸವಾಗಿದ್ದರೆ, ಉಳಿದಂತೆ ಎಲ್ಲಾ ಜಾಗಗಳಲ್ಲಿ ಇನ್ಯಾರೋ ಮನೆ ಕಟ್ಟಿ ವಾಸಿಸುತ್ತಿದ್ದಾರೆ. ಹೀಗಾಗಿ ಅಂತಹ ಮನೆಗಳನ್ನು ತೆರವುಗೊಳಿಸಬೇಕೆಂದು ಪಾಲಿಕೆ ಆಯುಕ್ತರು ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆಗೆಂದು ಜೆಸಿಬಿ ಜೊತೆಗೆ ಸ್ಥಳಕ್ಕೆ ತೆರಳಿದ್ದರು.
ತೆರವು ಕಾರ್ಯಾಚರಣೆಗೆ ಅಡ್ಡಿ ಪಡಿಸಿದ್ದರಿಂದ ಶನಿವಾರ ಸಾಧ್ಯವಾಗಲಿಲ್ಲ. ಅಡ್ಡಿ ಪಡಿಸಿದವರ ಮೇಲೆ ದೂರು ದಾಖಲಿಸಲಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಮತ್ತೆ ಅಕ್ರಮ ಮನೆ ತೆರವು ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.