ಮಂಗಳೂರು, ಜೂ 12 (DaijiworldNews/DB): ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಸನಿಹವಿರುವ ಆರೋಗ್ಯ ಘಟಕದಲ್ಲಿ ನಿಯಮಬಾಹಿರವಾಗಿ ನಕಲಿ ವೈದ್ಯಕೀಯ ಪ್ರಮಾಣಪತ್ರ ಒದಗಿಸುತ್ತಿರುವ ಆರೋಪದಲ್ಲಿ ರೈಲ್ವೇ ಅಧಿಕಾರಿ ಸೇರಿದಂತೆ ಮೂವರು ಆರೋಪಿಗಳನ್ನು ಬೆಂಗಳೂರಿನ ಸಿಬಿಐ ಭ್ರಷ್ಟಾಚಾರ ತಡೆ ದಳ ಬಂಧಿಸಿದೆ.
ಸಹಾಯಕ ಮುಖ್ಯ ವೈದ್ಯಕೀಯ ಅಧೀಕ್ಷಕ ಕೂಡಾ ಬಂಧಿತರಲ್ಲಿ ಓರ್ವ ಎನ್ನಲಾಗಿದೆ. ಇಲ್ಲಿ ನಕಲಿ ವೈದ್ಯಕೀಯ ಪ್ರಮಾಣಪತ್ರ ನೀಡುವ ಜಾಲ ಕಳೆದ ಒಂದು ವರ್ಷದಿಂದ ಸಕ್ರಿಯವಾಗಿತ್ತು. ಈಗಾಗಲೇ 1500ಕ್ಕೂ ಹೆಚ್ಚು ದಕ್ಷಿಣ ಮತ್ತು ನೈಋತ್ಯ ರೈಲ್ವೇ ಸಿಬಂದಿಗೆ ನಕಲಿ ಪ್ರಮಾಣಪತ್ರವನ್ನು ನೀಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಹೀಗಾಗಿ ತಡರಾತ್ರಿವರೆಗೂ ಸಿಬಿಐ ಭ್ರಷ್ಟಾಚಾರ ತಡೆ ದಳವು ಇಲ್ಲಿ ತಪಾಸಣೆ ನಡೆಸಿತು. ಸಂಬಂಧಪಟ್ಟ ದಾಖಲೆಗಳನ್ನೂ ತಂಡ ಇದೇ ವೇಳೆ ಕಲೆ ಹಾಕಿತು.
ರೈಲ್ವೇ ಇಲಾಖೆಯೊಂದಿಗೆ ಕೆಲಸ ಮಾಡುವ ಪರವಾನಿಗೆಯುಳ್ಳ ವರ್ತಕರು, ಪೋರ್ಟರ್ಗಳು, ಹೌಸ್ ಕೀಪಿಂಗ್ ಸಿಬಂದಿ, ಕೇಟರರ್ಗಳು ಸೇರಿದಂತೆ ಎಲ್ಲರೂ ಪ್ರತಿವರ್ಷ ಕಡ್ಡಾಯವಾಗಿ ಮೆಡಿಕಲ್ ಫಿಟ್ನೆಸ್ ಸರ್ಟಿಫಿಕೇಟ್ನ್ನು ಇಲಾಖೆಗೆ ನೀಡಬೇಕೆಂಬ ನಿಯಮವಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು ಇಂತಹ ಸಿಬಂದಿಗಳಿಗೆ ನಕಲಿ ಪ್ರಮಾಣಪತ್ರವನ್ನು ಸುಲಭದಲ್ಲಿ ಒದಗಿಸಿಕೊಡುತ್ತಿದ್ದರು. ದಲ್ಲಾಳಿಗಳ ನೆರವಿನೊಂದಿಗೆ ಆಧಾರ್ ಕಾರ್ಡ್ ನೀಡಿದರೆ 525 ರೂ.ಗಳಿಗೆ ವಾಟ್ಸಾಪ್ ಮೂಲಕ ಸರ್ಟಿಫಿಕೇಟ್ನ್ನು ನೀಡುತ್ತಿದ್ದರು. ಹಣವನ್ನೂ ಆನ್ಲೈನ್ನಲ್ಲೇ ಪಾವತಿ ಮಾಡುವುದಕ್ಕೆ ಹೇಳುತ್ತಿದ್ದರು. ಈ ನಿಯಮಬಾಹಿರ ಕೆಲಸದ ಬಗ್ಗೆ ಸಾರ್ವಜನಿಕರ್ಯಾರೋ ಸಿಬಿಐಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ದಳವು ಕಾರ್ಯಾಚರಣೆಗಿಳಿದು ಅಕ್ರಮ ಎಸಗಿದ ಆರೋಪಿಗಳನ್ನು ಬಂಧಿಸಿದ್ದಾರೆ.