ಉಳ್ಳಾಲ, ಜೂ 11 (DaijiworldNews/HR): ಕ್ಯಾನ್ಸರ್ ಅನ್ನುವುದು ದೊಡ್ಡ ಪ್ರಮಾಣದಲ್ಲಿ ಜನರಲ್ಲಿ ಆವರಿಸುತ್ತಿರುವ ಮಾರಕ ಕಾಯಿಲೆ. ಇದನ್ನು ಸೂಕ್ತ ಸಮಯದಲ್ಲಿ ಪತ್ತೆಹಚ್ಚುವ ಕಾರ್ಯವಾಗಬೇಕು. ಆ ಮೂಲಕ ಚಿಕಿತ್ಸೆಯನ್ನು ನೀಡುವುದರಿಂದ ರೋಗ ಗುಣಮುಖವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಟಾಟಾ ಟ್ರಸ್ಟ್ ಸಹಯೋಗದಿಂದ ದೇಶದಲ್ಲೇ ಬೆಂಗಳೂರು-ಮುಂಬೈ ಹೊರತುಪಡಿಸಿ ಇದೀಗ ಜಿಲ್ಲೆಯ ದೇರಳಕಟ್ಟೆಯ ಯೆನೆಪೋಯದಲ್ಲಿ ಅತ್ಯಾಧುನಿಕ ಉಪಕರಣದ ಜೊತೆಗೆ ನೂತನ ಚಿಕಿತ್ಸಾ ವಿಧಾನ ಆರಂಭಗೊಂಡಿರುವುದು ಜಿಲ್ಲೆಗೆ ಹೆಮ್ಮೆಯ ವಿಚಾರ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ದೇರಳಕಟ್ಟೆಯ ಯೆನೆಪೋಯ ವಿಶ್ವವಿದ್ಯಾಲಯ(ಪರಿಗಣಿಸಲ್ಪಟ್ಟ ವಿ.ವಿ) ಹಾಗೂ ಟಾಟಾ ಟ್ರಸ್ಟ್ ಸಹಯೋಗದಲ್ಲಿ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆ ವಠಾರದಲ್ಲಿ ನಿರ್ಮಾಣಗೊಂಡ ಜುಲೇಖಾ ಯೆನೆಪೋಯ ಕ್ಯಾನ್ಸರ್ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಟಾಟಾ ಟ್ರಸ್ಟ್ ಕ್ಯಾನ್ಸರ್ ಫ್ರೀ ಅಭಿಯಾನದಂಗವಾಗಿ ಅಂಕೋಲಜಿ ಘಟಕವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಾಪನೆ ಮಾಡುವ ಮೂಲಕ ಜಿಲ್ಲೆಯ ಅರೋಗ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದೆ. ಇದಕ್ಕಾಗಿ ಟಾಟಾ ಟ್ರಸ್ಟ್ ಅನ್ನು ಅಭಿನಂದಿಸುತ್ತೇನೆ. ಜಿಲ್ಲೆಯಲ್ಲಿ ವೈದ್ಯಕೀಯ ಸೌಲಭ್ಯ ಚೆನ್ನಾಗಿದೆ. ಬೆಂಗಳೂರು ಹೊರತುಪಡಿಸಿ ಯೆನೆಪೋಯದಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡಲು ಆಧುನಿಕ ತಂತ್ರಜ್ಞಾನ ಅಳವಡಿಸಿರುವುದು ಹೆಮ್ಮೆಯ ವಿಚಾರ. ಕೋವಿಡ್ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಿದ್ದೇವೆ. ಹೀಗಾಗಿ ನಮ್ಮ ದೇಶ ಕೊರೋನ ವಿರುದ್ಧ ಸಶಕ್ತವಾಗಿ ಹೋರಾಡಿದೆ. ಈಗ ಪ್ರಾರಂಭವಾಗಿರುವ ಅಂಕೋಲಜಿ ಘಟಕವನ್ನು ಎಲ್ಲ ಜಿಲ್ಲೆಗಳ ಜನರು ಬಳಸಿಕೊಳ್ಳಲಿ, ಜಿಲ್ಲೆಯ ಮಟ್ಟಿಗೆ ಕ್ಯಾನ್ಸರ್ ಆಸ್ಪತ್ರೆ ಅವಿಸ್ಮರಣೀಯ ದಿನ, ಆರೋಗ್ಯ ಕ್ಷೇತ್ರದಲ್ಲಿ ದ.ಕ ಜಿಲ್ಲೆ ಉಳಿದ ಜಿಲ್ಲೆಗಳಿಗಿಂತ ಸರಕಾರ ಖಾಸಗಿ ಸಂಸ್ಥೆಗಳ ಮೂಲಕ ಪ್ರಗತಿಯನ್ನು ಸಾಧಿಸಿದೆ. ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆ ಮೂಲಕ ಉಳಿದ ಜಿಲ್ಲೆಯವರಿಗೆ ಸಹಕಾರಿಯಾಗಿದೆ. ಶಿಕ್ಷಣ ಸಂಸ್ಥೆಗಳು, ಗುಣಮಟ್ಟದ ಆಸ್ಪತ್ರೆಗಳು ಇರುವ ಜಿಲ್ಲೆಗೆ ಹೊರರಾಜ್ಯ ಹಾಗೂ ಹೊರಜಿಲ್ಲೆಯವರು ಹೆಚ್ಚಾಗಿ ಬರುತ್ತಾರೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮುಂಬೈ ಟಾಟಾ ಟ್ರಸ್ಟ್ ಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶ್ರೀನಾಥ್ ಯನ್. ಮಾತನಾಡಿ 1941ರಲ್ಲಿ ಟಾಟಾ ಕೇರ್ ಪ್ರಾರಂಭವಾಗಿದ್ದು ದೇಶದಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ಜನರ ಕೈಯನ್ನು ಬಳಪಡಿಸುವ ಕಾರ್ಯದಲ್ಲಿ ನಿರತವಾಗಿದೆ. ಕ್ಯಾನ್ಸರ್ ಫ್ರೀ ಅಭಿಯಾನದ ಅಂಗವಾಗಿ ಯೆನೆಪೋಯ ಇನ್ಸ್ಟಿಟ್ಯೂಟ್ ನಲ್ಲಿ ಅಂಕೋಲಜಿ ಘಟಕ ಆರಂಭಗೊಂಡಿರುವುದು ಸಂತಸದ ವಿಚಾರ. ಇದಕ್ಕಾಗಿ ಯೆನೆಪೋಯ ಸಂಸ್ಥಾಪಕರು ಹಾಗೂ ಎಲ್ಲ ಆಡಳಿತ ವರ್ಗವನ್ನು ಅಭಿನಂದಿಸುತ್ತೇನೆ. ಆಸ್ಪತ್ರೆಯ ಸಿಬ್ಬಂದಿಗೆ ರೋಗಿಗಳ ಆರೈಕೆಯ ಮಹ್ಹತರ ಜವಾಬ್ದಾರಿ ಇದ್ದು, ಅದನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಟ್ರಸ್ಟ್ ಆಶಯದ ಜೊತೆಗೆ ಸಂಸ್ಥೆಯ ಗೌರವ ಹೆಚ್ಚಿಸಿರಿ ಎಂದಿದ್ದಾರೆ.
ಶಾಸಕ ಯು.ಟಿ. ಖಾದರ್ ಮಾತನಾಡಿ, "ಜಿಲ್ಲೆಯಲ್ಲಿ ಮೊದಲ ಅಂಕೋಲಜಿ ಘಟಕವನ್ನು ಪ್ರಾರಂಭಿಸಲು ಮುತುವರ್ಜಿ ವಹಿಸಿದ ಟಾಟಾ ಟ್ರಸ್ಟ್ ಹಾಗೂ ಯೆನೆಪೋಯ ಯೂನಿವರ್ಸಿಟಿಯನ್ನು ಅಭಿನಂದಿಸುತ್ತೇನೆ. ಕ್ಯಾನ್ಸರ್ ರೋಗ ಇಡೀ ವಿಶ್ವದಲ್ಲಿ ಹೆಚ್ಚುತ್ತಿದ್ದು ಈ ಸಂದರ್ಭದಲ್ಲಿ ರೋಗದ ವಿರುದ್ಧ ಹೋರಾಡಲು ಇಂತಹ ತಂತ್ರಜ್ಞಾನ ಅವಶ್ಯವಾದುದು. ಹೀಗಾಗಿ ಟಾಟಾ ಮಾಡಿರುವ ಅಭಿಯಾನ ಪ್ರಶಂಸೆಗೆ ಪಾತ್ರವಾದುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೆನೆಪೋಯ ವಿಶ್ವವಿದ್ಯಾಲಯ (ಪರಿಗಣಿಸಲ್ಪಟ್ಟ ವಿ.ವಿ) ಯ ಕುಲಪತಿ ಡಾ.ಯೆನೆಪೋಯ ಅಬ್ದುಲ್ಲಾ ಕುಂಞ ವಹಿಸಿದ್ದರು. ಮಾಜಿ ಸಂಸದ ಹಾಗೂ ಹಜ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಬ್ದುಲ್ಲಾ ಕುಟ್ಟಿ, ಇಸ್ಲಾಮಿಕ್ ಎಜ್ಯುಕೇಷನ್ ಟ್ರಸ್ಟ್ ಅಧ್ಯಕ್ಷ ಮೊಹಮ್ಮದ್ ಕುಂಞ, ಕ್ಯಾನ್ಸರ್ ಮಹಾಮಾರಿಯಿಂದಾಗಿ ನಮ್ಮ ತಾಯಿ ಜುಲೇಕಾ ಅವರನ್ನು ಕಳೆದುಕೊಳ್ಳುವಂತಾಯಿತು. ಟಾಟಾ ಟ್ರಸ್ಟ್ ನಮ್ಮ ಜೊತೆ ಕೈಜೋಡಿಸಿದ ಕಾರಣ ಕ್ಯಾನ್ಸರ್ ಚಿಕಿತ್ಸೆಗಾಗಿ ಅಂಕೋಲಜಿ ಘಟಕ ಸ್ಥಾಪಿಸುವ ನಮ್ಮ ಕನಸು ನೆರವೇರಿದೆ. ಟಾಟಾ ಟ್ರಸ್ಟ್ ನ ರತನ್ ಟಾಟಾ ಮತ್ತು ಕ್ಯಾನ್ಸರ್ ಫ್ರೀ ಅಭಿಯಾನದ ತಂಡಕ್ಕೆ ಅಭಿನಂದನೆಗಳು ಎಂದರು.
ಝುಲೇಖಾ ಯೆನೆಪೋಯ ಆಂಕಾಲಜಿ ಆಸ್ಪತ್ರೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್, ರೇಡಿಯೋಥೆರಪಿ ವಿಭಾಗವನ್ನು ಟಾಟಾ ಟ್ರಸ್ಟ್ ಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶ್ರೀನಾಥ್ ಯನ್., ಡೇ ಕೇರ್ ಕಿಮೋಥೆರಪಿ ಸೆಂಟರನ್ನು ಮಂಗಳೂರು ಕ್ಷೇತ್ರದ ಶಾಸಕ ಯು.ಟಿ ಖಾದರ್, ನ್ಯೂಕ್ಲಿಯರ್ ಮೆಡಿಸಿನ್ ವಿಭಾಗವನ್ನು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಹೊರರೋಗಿ ಚಿಕಿತ್ಸಾ ಕೇಂದ್ರವನ್ನು ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಹಾಗೂ ಸುರತ್ಕಲ್ ಶಾಸಕ ಡಾ.ವೈ.ಭರತ್ ಶೆಟ್ಟಿ ಹಾಗೂ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ವಿಧಾಪರಿಷತ್ ಸದಸ್ಯರುಗಳಾದ ಕೆ.ಹರೀಶ್ ಕುಮಾರ್, ಮಂಜುನಾಥ್ ಭಂಡಾರಿ ಹಾಗೂ ಪ್ರತಾಪ್ ಸಿಂಹ ನಾಯಕ್ ಕಿಮೋಥೆರಪಿ ವಿಭಾಗವನ್ನು ಉದ್ಘಾಟಿಸಿದರು.