ತುಮಕೂರು, ಜ 14 (MSP): ಸಿದ್ಧಗಂಗಾ ಮಠದ ಹಿರಿಯ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿಲ್ಲ. ಈ ಹಿನ್ನಲೆಯಲ್ಲಿ ಶ್ರೀಗಳಿಗೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿದ್ದು, ಆಗಾಗ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗುತ್ತಿದೆ. ಎಂದು ಸಿದ್ದಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪರಮೇಶ್ ಮಾಹಿತಿ ನೀಡಿದ್ದಾರೆ. ಶ್ರೀಗಳ ಶ್ವಾಸಕೋಶದ ಎರಡೂ ಭಾಗದಲ್ಲೂ ನೀರು ತುಂಬಿಕೊಂಡಿದ್ದು ಹೊರತೆಗೆಯಲಾಗಿದೆ. ಸದ್ಯ ದ್ರವ ಆಹಾರ ಮುಂದುವರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಶ್ವಾಸಕೋಶದಲ್ಲಿ ತುಂಬಿದ್ದ ನೀರನ್ನು ಹೊರತೆಗೆಯಲಾಗಿದೆ. ಸ್ವಾಭಾವಿಕವಾಗಿ ಶರೀರದಲ್ಲಿ ಉತ್ಪತ್ತಿ ಆಗಬೇಕಾಗಿದ್ದ ಪೋಷಕಾಂಶ, ರಕ್ತದ ಕಣಗಳು ಉತ್ಪತ್ತಿ ಆಗುತ್ತಿಲ್ಲ. ಬಾಹ್ಯವಾಗಿ ಪೋಷಕಾಂಶಗಳನ್ನು ಹೆಚ್ಚು ದಿನ ನೀಡಲು ಸಾಧ್ಯವಿಲ್ಲ ಹೀಗೆ ಮಾಡಿದರೆ ಅಡ್ಡ ಪರಿಣಾಮಗಳಾಗುತ್ತದೆ. ಶ್ರೀಗಳು ಸನ್ನೆ ಮೂಲಕವೇ ಮಾತನಾಡುತ್ತಿದ್ದು, ಮಲಗಿದ್ದಲ್ಲಿಯೇ ಕಣ್ಣು ಬಿಟ್ಟು ನೋಡುತ್ತಿದ್ದಾರೆ. ಕೈಕಾಲುಗಳಲ್ಲಿ ಚಲನವಲನ ಇದೆ. ಆದರೆ ಪೂಜೆ ಮಾಡಲು ಸಾಧ್ಯವಾಗುತ್ತಿಲ್ಲ ಮಾತ್ರ ಎಂದು ಅವರು ತಿಳಿಸಿದ್ದಾರೆ. ಕೆಲಕಾಲ ಕೃತಕ ಉಸಿರಾಟದ ಸಾಧನ ತೆರುವುಗೊಳಿಸಿ ಸಹಜ ಉಸಿರಾಟಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಎರಡು ಗಂಟೆಗಳ ಕಾಲ ಸಹಜ ಉಸಿರಾಟದ ನಂತರ ಮತ್ತೆ ತೊಂದರೆ ಕಂಡು ಬಂದರೆ ಕೃತಕ ಉಸಿರಾಟ ಸಾಧನ ಅಳವಡಿಸುತ್ತಿದ್ದೇವೆ. ಶನಿವಾರ ಶ್ರೀಗಳ ದೇಹದಲ್ಲಿ ಪ್ರೋಟಿನ್ ಅಂಶ 3.1 ಮಿಲಿ ಗ್ರಾಂ ಇತ್ತು. ಭಾನುವಾರ 2.6 ಮಿಲಿ ಗ್ರಾಂಗೆ ಇಳಿಕೆಯಾಗಿದೆ ಎಂದು ಡಾ. ಪರಮೇಶ್ ತಿಳಿಸಿದ್ದಾರೆ.