ಉಳ್ಳಾಲ, ಜೂ 11 (DaijiworldNews/HR): ನಾಡದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಕಸಬಾ ಬೆಂಗರೆ ನಿವಾಸಿ ಹೈದರ್ ಆಲಿ (38) ಉಳ್ಳಾಲ ಕೋಡಿಯಿಂದ ಸುಮಾರು 14 ಮಾರು ದೂರದಲ್ಲಿ ಸಮುದ್ರದಲ್ಲಿರುವಾಗಲೇ ಸಿಡಿಲು ಬಡಿದು ಮೃತಪಟ್ಟ ಘಟನೆ ಶನಿವಾರ ಸಂಭವಿಸಿದೆ.
ಮೀನುಗಾರಿಕೆ ವೃತ್ತಿ ಮಾಡುತ್ತಿದ್ದ ಹೈದರಾಲಿ ಎಂದಿನಂತೆ ಇಂದು ಬೆಳಗ್ಗೆ ತನ್ನ ಸಹವರ್ತಿಗಳಾದ ಆಸಿಫ್ಎಚ್, ಇಮ್ರಾನ್, ಫರಾಝ್, ಇಮ್ರಾನ್, ಮತ್ತು ಅನ್ವರ್ ಅವರೊಂದಿಗೆ ಕಸಬಾ ಬೆಂಗರೆಯಿಂದ ಎ.ಎಸ.ಎಫ್ ತವಕ್ಕಲ್ ಹೆಸರಿನ ನಾಡದೋಣಿಯಲ್ಲಿ ಮೀನುಗಾರಿಕೆಗೆ ಬೆಳಗ್ಗೆ 5 ಗಂಟೆಗೆ ತೆರಳಿದ್ದರು. ಉಳ್ಳಾಲ ಕೋಡಿಯಿಂದ ಸುಮಾರು 14 ಮಾರು ದೂರದಲ್ಲಿ ಸುಮಾರು 7.30ರ ಹೊತ್ತಿಗೆ ತಲುಪಿದ್ದು, ಬಲೆ ಬೀಸುತ್ತಿದ್ದಾಗ ಸಿಡಿಲು -ಮಿಂಚು ಆರಂಭಗೊಂಡಿದ್ದು, ಹೈದರಾಲಿಗೆ ಸಿಡಿಲೊಂದು ಬಡಿದಿದ್ದು, ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಹೈದರಾಲಿಯನ್ನು ಸಹವರ್ತಿಗಳು ದೋಣಿಯಲ್ಲಿ ದಡಕ್ಕೆ ತಂದು ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ತಲುಪಿದಾಗ ವೈದ್ಯರು ಮೃತಪಟ್ಟಿರುವುದನ್ನು ದೃಡೀಕರಿಸಿದ್ದಾರೆ.
ಮೃತ ಹೈದರಾಲಿ ತಾಯಿ, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.