ಕಾರ್ಕಳ, ಜೂ 11 (DaijiworldNews/HR): ಕಾರ್ಕಳವನ್ನು ಮತ್ತೇ ಕಾಂಗ್ರೆಸ್ನ ಭದ್ರಕೋಟೆಯನ್ನಾಗಿ ಪರಿವರ್ತನೆ ಮಾಡುವುದೇ ನನ್ನ ಮೂಲ ಉದ್ದೇಶವಾಗಿದೆ. ಇದು ಬರೀ ಭರವಸೆಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಾ. ಎಂ.ವೀರಪ್ಪ ಮೊಯಿಲಿ ಶಪಥಗೈದಿದ್ದಾರೆ.
ಕಾರ್ಕಳದ ಪ್ರವಾಸಿ ಮಂದಿರದಲ್ಲಿ ಶನಿವಾರ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಕಳದ ಜನತೆ ನನಗೆ ಆಶೀರ್ವಾದ ಮಾಡಿದುದರ ಪ್ರತಿಫಲವಾಗಿ ಸತತ ಆರು ಬಾರಿ ಕಾರ್ಕಳ ಶಾಸಕರಾಗಿ ರಾಜ್ಯದ ಮುಖ್ಯಮಂತ್ರಿ ಹುದ್ದೆಗೇರಿದ್ದೇನೆ. ಆದರೆ ಪ್ರಸಕ್ತ ಸಾಲಿನಲ್ಲಿ ಕಾರ್ಕಳದಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಪ್ರಯತ್ನಿಸಲಿದ್ದೇನೆ. ಪ್ರತಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲಿದ್ದೇನೆ. ಮುಂಬರುವ ಆಗಸ್ಟ್ ತಿಂಗಳಿನಿಂದ ಇಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಕಾಂಗ್ರೆಸ್ನ ಗತವೈಭವ ಮರುಕಳಿಸುವಂತೆ ಕಾರ್ಯನಿರ್ವಹಿಸಲಿದ್ದೇನೆ ಎಂದರು.
ಕಾರ್ಕಳ ತಾಲೂಕಿನ ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆಯೊಂದಕ್ಕೆ ನಾಥೂರಾಮ್ ಗೋಡ್ಸೆ ಹೆಸರಿನ ನಾಮಫಲಕದ ವಿರುದ್ದ ಹೋರಾಟ ಶುರುವಾಗಲಿದೆ ಎಂದು ಡಾ. ವೀರಪ್ಪ ಮೊಯ್ಲಿ ಹೇಳಿದ್ದಾರೆ.
ರಾಷ್ಟ್ರೀಯತೆ ಹಾಗೂ ನಾಯಕತ್ವಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿರುವ ಹಾಗೂ ದೇಶದ್ರೋಹಿ ಕೃತ್ಯದಲ್ಲಿ ತೊಡಗಿಸಿಕೊಂಡವರು ಯಾರೇ ಆಗಲಿ ಅವರನ್ನು ಬಂಧಿಸುವಂತಹ ಜವಾಬ್ದಾರಿ ಸರಕಾರ ಹಾಗೂ ಪೊಲೀಸ್ ಇಲಾಖೆಯದ್ದು. ಐಪಿಎಸ್ ಸೆಕ್ಷನ್ ಪ್ರಕಾರ ಕೇಸು ದಾಖಲಿಸಬೇಕು. ಈ ಪ್ರಕರಣವನ್ನು ಪೊಲೀಸ್ ಇಲಾಖೆ ಹಗುರವಾಗಿ ಪರಿಗಣಿಸಿದ್ದಲ್ಲಿ, ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆಯಗಿ ಪರಿಣಮಿಸಲಿದೆ. ಗೋಡ್ಸೆ ಅನುಯಾಯಿಗಳು ಹಾಗೂ ವಿಕೃತ ಮನಸ್ಸನ್ನು ಹೊಂದಿದ್ದ ವ್ಯಕ್ತಿಗಳು ಈ ನಾಮಫಲಕ ಅಳವಡಿಸಿದ್ದಾರೆ ಎಂದು ಆರೋಪಿಸಿದರು.
ಜಾತಿ ಲೆಕ್ಕಾಚಾರವನ್ನು ಕಾಂಗ್ರೇಸ್ ಮಾಡುವುದಿಲ್ಲ. ಆದ್ದರಿಂದ ಜಾತಿ ಧ್ರವೀಕರಣವಾಗಬಾರದು ಎಲ್ಲರೊಂದಿಗೆ ಸಮಾನವಾಗಿ ಇರಬೇಕು ಅದೇ ಕಾಂಗ್ರೆಸ್ ಲೆಕ್ಕಾಚಾರವಾಗಿದೆ. ಬಿಜೆಪಿಯು ವಿದ್ಯಾರ್ಥಿಗಳಲ್ಲಿ ವಿಷ ಬೀಜ ಬಿತ್ತುವ ಕಾರ್ಯ ಮಾಡುತ್ತಿದೆ . ಕೋಮು ಭಾವನೆಯನ್ನು ಪಠ್ಯಗಳಲ್ಲಿ ಅಳವಡಿಸಿ ಮುಗ್ಧ ಜೀವಿಗಳ ಭಾವನೆ ಕೆರಳಿಸಿ ಅದರ ಲಾಭವನ್ನು ಪಡೆಯುತ್ತಿದೆ. ಇದು ದೇಶಕ್ಕೆ ಅಪಾಯದ ಮುನ್ಸೂಚನೆ. ಪಾಶ್ಚಿಮಾತ್ಯ ದೇಶಗಳಲ್ಲಿ ವಿದ್ಯಾಸಂಸ್ಥೆಗಳಲ್ಲಿ ಎಗ್ಗಿಲ್ಲದೇ ನಡೆಯುವ ಕ್ರೌರ್ಯ ಕೃತ್ಯಗಳು ನಮ್ಮ ದೇಶದಲ್ಲಿ ವಕ್ಕರಿಸಬಹುದು. ಮುಂದಿನ ಪೀಳಿಗೆಯ ಇದು ಅಪಾಯದ ಕರೆಗಂಟೆಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ, ಸುಧಾಕರ ಕೋಟ್ಯಾನ್, ಸುರೇಂದ್ರ ಶೆಟ್ಟಿ ಹಿರಿಯಂಗಡಿ, ಶೇಖರ ಮಡಿವಾಳ, ಜಿಲ್ಲಾ ವಕ್ತಾರ ಬಿಪಿನ್ಚಂದ್ರಪಾಲ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಂಜನಿ ಹೆಬ್ಬಾರ್, ತಾಲೂಕು ವಕ್ತಾರ ಶುಭದ ರಾವ್, ನಗರ ಕಾಂಗ್ರೆಸ್ ಅಧ್ಯಕ್ಷ ಮಧುರಾಜ್ ಶೆಟ್ಟಿ, ಅಣ್ಣಯ್ಯ ಶೇರಿಗಾರ್, ಬಾಲಕೃಷ್ಣ, ಪ್ರಭಾಕರ ಬಂಗೇರ, ರವಿಶಂಕರ್ ಶೇರಿಗಾರ್, ಸುಭಿತ್ ಎನ್.ಆರ್., ಸುಧಾಕರ ಶೆಟ್ಟಿ, ನವೀನ್ ದೇವಾಡಿಗ, ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ನಯನ್ ಇನ್ನಾ, ಅಶ್ಪಕ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.