ಮಂಗಳೂರು,ಜ 14 (MSP): ನಗರದ ಮೋರ್ಗನ್ ಗೇಟ್ ಬಳಿಯ ಮೈದಾನದಲ್ಲಿ ಶನಿವಾರ ಗಾಂಜಾ ಸೇವಿಸುತ್ತಲೇ ಸಾರ್ವಜನಿಕರಿಗೆ ಅದನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಎಂಟು ವಿದ್ಯಾರ್ಥಿಗಳನ್ನು ನಗರ ಅಪರಾಧ ಘಟಕ (ಸಿಸಿಬಿ) ಹಾಗೂ ಆರ್ಥಿಕ ಅಪರಾಧ ಮತ್ತು ಮಾದಕವಸ್ತು ನಿಯಂತ್ರಣ (ಇ ಅಂಡ್ ಎನ್) ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಏಳು ಮಂದಿ ಕೇರಳದ ವಿದ್ಯಾರ್ಥಿಗಳು. ಬಂಧಿತರಿಂದ ಗಾಂಜಾ, ಎರಡು ದ್ವಿಚಕ್ರ ವಾಹನ ಸಹಿತ ಒಟ್ಟು 1,69,050 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೂಲತಃ ಕೇರಳದ ಕೊಲ್ಲಂ ಜಿಲ್ಲೆಯ ಕರಿಪ್ರ ಗ್ರಾಮದ, ಪ್ರಸ್ತುತ ಮಂಗಳೂರಿನ ಕದ್ರಿಯಲ್ಲಿರುವ ಅಕ್ಷಯ್ ಕೆ. ಪ್ರಸಾದ್ (22), ಕೇರಳದ ಕಣ್ಣೂರು ಮೂಲದ ನಿವಾಸಿಗಳಾದ ನಿಮಿಲ್ (21), ಅಮಿತ್ ಶ್ರೀವತ್ಸನ್ (21), ಅಶ್ವಿನ್(21), ಮಹಮ್ಮದ್ ಆಮಿರ್ (22), ಆಕಾಶ್ ಎಸ್. ನಾಯರ್ (23), ಅಕ್ಷಯ್ (22) ಹಾಗೂ ಮಂಗಳೂರು ನಗರದ ಹೊರವಲಯ ಕಣ್ಣೂರು ಬೋರುಗುಡ್ಡೆ ನಿವಾಸಿ ಜಾಫರ್ (22) ಬಂಧಿತರು. ಆರೋಪಿಗಳು ಕೇರಳದಿಂದ ಗಾಂಜಾ ಖರೀದಿಸಿ ತಂದು ಮಂಗಳೂರಿನಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು. ಆರೋಪಿಗಳಲ್ಲಿ ಏಳು ಮಂದಿ ಕೇರಳದವರಾಗಿದ್ದು ನಗರದ ಎರಡು ಎಂಜಿನಿಯರಿಂಗ್ ಕಾಲೇಜು ಮತ್ತು ಒಂದು ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.
ನಗರದ ಮೋರ್ಗನ್ಸ್ಗೇಟ್ ಬಳಿಯ ಮೈದಾನಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಆಧಾರದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಬಂಧಿತರಿಂದ 12,000 ರೂ. ಮೌಲ್ಯದ 500 ಗ್ರಾಂ ಗಾಂಜಾ, 8 ಮೊಬೈಲ್ ಫೋನ್ಗಳು, 4,050 ರೂ. ಹಾಗೂ ಎರಡು ದ್ವಿಚಕ್ರ ವಾಹನಗಳ ಸಹಿತ 1,69,050 ರೂ. ಮೌಲ್ಯದ ಸೊತ್ತು ವಶ ವಶಪಡಿಸಿಕೊಳ್ಳಲಾಗಿದೆ.
ಸಿಸಿಬಿ ಇನ್ಸ್ಪೆಕ್ಟರ್ ಶಾಂತಾರಾಮ, ಎಕೊನಾಮಿಕ್ ಆ್ಯಂಡ್ ನಾರ್ಕೋಟಿಕ್ ಕ್ರೆ„ಂ ಠಾಣೆಯ ಇನ್ಸ್ಪೆಕ್ಟರ್ ರಾಮಕೃಷ್ಣ ಕೆ.ಕೆ. ಮತ್ತು ಸಿಸಿಬಿ ಪಿಎಸ್ಐ ಕಬ್ಟಾಳ್ರಾಜ್ ಎಚ್.ಡಿ. ಹಾಗೂ ಸಿಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.