ಮಂಗಳೂರು, ಜ 13(SM): ಪಣಂಬೂರು ಮತ್ತು ಸುರತ್ಕಲ್ ಪರಿಸರದಲ್ಲಿ ನಿಲ್ಲಿಸಿದ್ದ ಲಾರಿಗಳ ಚಾಲಕ ಹಾಗೂ ನಿರ್ವಾಹಕರಿಗೆ ಚೂರಿಯಿಂದ ಇರಿದು ಬೆದರಿಸಿ ಮೊಬೈಲ್ ಗಳನ್ನು ದರೋಡೆ ಮಾಡುತ್ತಿದ್ದ ಮತ್ತು ಕುಳಾಯಿಯ ರಾ.ಹೆ. 66 ಬದಿಯಲ್ಲಿ ನಿಲ್ಲಿಸಿದ್ದ ಜನರೇಟರ್ ಗಳಿಂದ ಬ್ಯಾಟರಿಗಳನ್ನು ಕಳ್ಳತನ ಮಾಡುತ್ತಿದ್ದ ತಂಡ ವನ್ನು ದಸ್ತಿಗಿರಿ ಮಾಡುವಲ್ಲಿ ಮಂಗಳೂರು ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳ ಮತ್ತು ಪಣಂಬೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಅಬ್ದುಲ್ ಅಮೀರ್ ಯಾನೆ ಅಮೀರ್, ಅಬ್ದುಲ್ ಬಿಲಾಲ್ ಮತ್ತು ತನ್ವೀರ್ ಎಂದು ಗುರುತಿಸಲಾಗಿದೆ. ಜನವರಿ 10ರ ಮುಂಜಾನೆ ವಿಜಯಪುರ ಜಿಲ್ಲೆಯ ನಿವಾಸಿ 56 ವರ್ಷ ಪ್ರಾಯದ ಸಂಶುದ್ದೀನ್ ರವರು ಪಣಂಬೂರು ನಂದನೇಶ್ವರ ದೇವಸ್ಥಾನದ ಮುಂಭಾಗದಲ್ಲಿ ತನ್ನ ಲಾರಿಯನ್ನು ನಿಲ್ಲಿಸಿ ಮಲಗಿದ್ದ ಸಂದರ್ಭ ಮೂರು ಆರೋಪಿಗಳು ಚಾಕು ತೋರಿಸಿ ಹೆದರಿಸಿ ಅವರಲ್ಲಿದ್ದ ಮೊಬೈಲ್ ಮತ್ತು ಹಣವನ್ನು ನೀಡುವಂತೆ ಬೆದರಿಸಿದ್ದು ಮೊಬೈಲ್ ಕೊಡಲು ನಿರಾಕರಿಸಿದ್ದಕ್ಕೆ ಚಾಲಕರ ಹಣೆಗೆ ಚಾಕುವಿನಿಂದ ತಿವಿದು ಗಾಯಗೊಳಿಸಿ ಮೊಬೈಲ್ ನ್ನು ಕಿತ್ತು ಪರಾರಿಯಾಗಿದ್ದರು.
ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಆರ್.ಶ್ರೀನಿವಾಸ್ ಗೌಡರವರ ನೇತೃತ್ವದ ರೌಡಿನಿಗ್ರಹ ದಳ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಇದೇ ಆರೋಪಿಗಳ ತಂಡ ಈ ಹಿಂದೆ ಸುರತ್ಕಲ್ ಠಾಣಾ ವ್ಯಾಪ್ತಿಯ ಕುಳಾಯಿ ರಾ.ಹೆ. 66ರ ಬದಿಯಲ್ಲಿ ನಿಲ್ಲಿಸಿದ್ದ ಜನರೇಟ್ ನಿಂದ ಬ್ಯಾಟರಿಗಳನ್ನು ಕೂಡಾ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ.
ಬಂಧಿತ ಆರೋಪಿಗಳಿಂದ ಅಂದಾಜು 2.50 ಲಕ್ಷ ರೂ ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ.