ಮಂಗಳೂರು: ಜೂನ್ 11 (DaijiworldNews/MS): ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ತಪ್ಪಿಸಲು ಯತ್ನಿಸಿದ ಇಬ್ಬರು ಕೊಲೆ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಮೂಲ್ಕಿ ಠಾಣಾ ವ್ಯಾಪ್ತಿಯ ಗ್ಲೋಬಲ್ ಹೆರಿಟೇಜ್ ಲೇಔಟ್ ಬಳಿ ನಡೆದಿದೆ.
ಕಳೆದ ಸೋಮವಾರ ರಾತ್ರಿ ಬೈಕಂಪಾಡಿ ಸಮೀಪದ ಮೀನಕಳಿ ಬಳಿ ನಡೆದ ರೌಡಿಶೀಟರ್ ರಾಜಾ ಅಲಿಯಾಸ್ ರಾಘವೇಂದ್ರ ಕೊಲೆ ಪ್ರಕರಣದ ಆರೋಪಿಗಳ ಬಂಧನ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ.
ಅರ್ಜುನ್ ಮೂಡುಶೆಡ್ಡೆ ಮತ್ತು ಮನೋಜ್ ಯಾನೆ ಬಿಂದಾಸ್ ಮನೋಜ್ ಬಂಧಿತ ಆರೋಪಿಗಳು.
ಮೂಲ್ಕಿ ಠಾಣಾ ವ್ಯಾಪ್ತಿಯಲ್ಲಿ ರಾಘವೇಂದ್ರ ಕೊಲೆ ಪ್ರಕರಣದ ಸಂಬಂಧ ಇನ್ನಷ್ಟು ಆರೋಪಿಗಳ ಬಂಧನಕ್ಕೆ ಕೊಂಡೊಯ್ಯುವ ವೇಳೆ ಈ ಇಬ್ಬರು ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ಮೂರು ಸುತ್ತು ಫೈರಿಂಗ್ ನಡೆಸಿದ್ದು, ಗಾಳಿಯಲ್ಲಿ ಒಂದು ಸುತ್ತು ಹಾರಿಸಿದ್ದು ಹಾಗೂ ಆರೋಪಿಗಳ ಕಾಲಿಗೆ ಎರಡು ಗುಂಡೇಟು ಬಿದ್ದಿದೆ.
ಘಟನೆಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಪಿಎಸ್ಐ ನಾಗೇಂದ್ರ, ಎಎಚ್ಸಿ ಸಂತೋಷ್ ಪೂಜಾರಿ ಮತ್ತು ಎಎಸ್ಐ ಡೇವಿಡ್ ಗಾಯಗೊಂಡಿದ್ದಾರೆ.
ಗಾಯಗೊಂಡಿರುವ ಆರೋಪಿಗಳು ಹಾಗೂ ಪೊಲೀಸರನ್ನು ನಗರದ ಮುಕ್ಕದಲ್ಲಿರುವ ಶ್ರೀನಿವಾಸ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ರೌಡಿಶೀಟರ್ ರಾಜಾ ಯಾನೆ ರಾಘವೇಂದ್ರ ಕಳೆದ ಸೋಮವಾರ ರಾತ್ರಿ 7.30ರ ಸುಮಾರಿಗೆ ಬೈಕಂಪಾಡಿ ಸುಪ್ರಿಯಾ ಬಾರ್ ಬಳಿಯಿಂದ ಮೀನಕಳಿಯ ರಸ್ತೆಯಾಗಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ಅಡ್ಡಗಟ್ಟಿ, ಮಾರಣಾಂತಿಕವಾಗಿ ದಾಳಿ ನಡೆಸಿದ್ದರು. , ರಾಜಾ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿ ಬಿದ್ದಿದ್ದು, ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ್ದ ಪೊಲೀಸರು ರಾಜಾನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಆಸ್ಪತ್ರೆಯಲ್ಲಿ ರಾಜಾ ಮೃತಪಟ್ಟಿದ್ದ.