ಕಾರ್ಕಳ, ಜೂ 10 (DaijiworldNews/DB): ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯಕರ್ತರು ರಾಷ್ಟ್ರಪ್ರೇಮ, ರಾಷ್ಟ್ರೀಯತೆ, ಸೇವಾ ಮನೋಭಾವಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟುಕೊಳ್ಳುವವರು. ಅಂತಹವರ ಸಮವಸ್ತ್ರವನ್ನು ಸುಟ್ಟು ಹಾಕುವ ಕಾಂಗ್ರೆಸ್ ಪಕ್ಷದವರ ಪ್ರಯತ್ನವು ವಿಕೃತ ಮನಸ್ಸಿನ ಪರಾಕಾಷ್ಠೆಯಾಗಿದೆ ಎಂದು ಸಮಾಜ ಕಲ್ಯಾಣ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಪಠ್ಯ ಪುಸ್ತಕ ಪರಿಷ್ಕರಣೆ ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯನ್ನು ಬರ್ಖಾಸ್ತುಗೊಳಿಸಲಾಗಿದೆ. ಸರಕಾರಗಳು ಬದಲಾದ ಸಂದರ್ಭದಲ್ಲಿ ಕೆಲವೊಮ್ಮೆ ಪಠ್ಯ ಪರಿಷ್ಕರಣೆ ಮಾಡುವುದು ಸಾಮಾನ್ಯ. ಪ್ರಸಕ್ತ ಸಾಲಿನಲ್ಲಿ ಹೆಗಡೆವಾರ್ ರವರ ಕುರಿತು ಪಠ್ಯದಲ್ಲಿ ಅಳವಡಿಕೆ ಮಾಡಿರುವುದು ಹೆಮ್ಮೆಯ ವಿಚಾರ. ಅವರೊಬ್ಬರು ರಾಷ್ಟ್ರೀಯತೆ ಹಾಗೂ ದೇಶ ಭಕ್ತಿಯನ್ನು ಬಿತ್ತಿದ ಮಹನೀಯರು ಎಂದು ಸಮರ್ಥಿಸಿಕೊಂಡರು.
ಎಸ್ಡಿಪಿಐ ಸಂಘಟನೆಯನ್ನುನಿಷೇಧಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಆದರೆ ಅದಕ್ಕೆ ಕಾಲಾವಕಾಶ ಬೇಕಾಗುತ್ತದೆ. ಕೇಂದ್ರವು ಈ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಿದೆ ಎಂದರು.
ಬೋಳ ಗ್ರಾ.ಪಂ ವ್ಯಾಪ್ತಿಯಲ್ಲಿ ನಾಥುರಾಮ್ ಗೋಡ್ಸೆ ಫಲಕ ಅಳವಡಿಸಿರುವುದು ಮುಗಿದ ಅಧ್ಯಾಯ. ಅದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದರು.
ವಿಶ್ವಮಟ್ಟದಲ್ಲಿ ಶಕ್ತಿ ಅನಾವರಣ
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವು ಸುಶಾಸನ ಹಾಗೂ ಬಡವರ ಕಲ್ಯಾಣ ಮಾಡುವ ಮೂಲಕ ಜನರ ಮನಗೆದ್ದಿದೆ. ಜಗತ್ತಿನ ಅನೇಕ ದೇಶಗಳು ಆರ್ಥಿಕತೆ, ವೈಚಾರಿಕತೆ ಆಸ್ತಿತ್ವ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿಯು ಭಾರತವು ವಿಶ್ವಮಟ್ಟದಲ್ಲಿ ಸಧೃಢವಾಗಿದ್ದುಕೊಂಡು ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ಆಡಳಿತಾತ್ಮಕ ನಿರ್ಧಾರಗಳು ಆತ್ಮ ನಿರ್ಭರ, ದೂರಗಾಮಿ ಯೋಜನೆಗಳು ಭಾರತದ ಶಕ್ತಿಯನ್ನು ವಿಶ್ವಮಟ್ಟದಲ್ಲಿ ತೋರಿಸುತ್ತಿದೆ ಎಂದರು.
ರಾಜ್ಯ ಸರ್ಕಾರದ ಯೋಜನೆಗಳು ಕಟ್ಟಕಡೆಯ ಮನೆಗೂ ತಲುಪುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರ ಮನಸೆಳೆದಿದೆ. ಕೊರೋನಾ ಸಾಂಕ್ರಾಮಿಕ ಹರಡುತ್ತಿದ್ದ ಸಂಕಷ್ಟದ ದಿನಗಳಲ್ಲಿ ಶೇ. 84ರಷ್ಟು ಮಂದಿ ಆಯುಷ್ಮಾನ್ ಕಾರ್ಡ್ ಯೋಜನೆಯನ್ನು ಸದ್ಬಳಕೆ ಮಾಡಿದ್ದಾರೆ. ರಾಜ್ಯದ ರೈತ ಮಕ್ಕಳಿಗೆ ವಿದ್ಯಾನಿಧಿ ಮೂಲಕ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವು ರಾಜ್ಯಕ್ಕೆ ಬೆಳಕಾಗಿಸಿದೆ ಎಂದವರು ಹೇಳಿದರು.
ನಮ್ಮೆ ಧ್ಯೇಯ ಗೋರಕ್ಷೆ
ಪಶು ಸಂಗೋಪನೆ ಇಲಾಖೆಯ ವತಿಯಿಂದ ರಾಜ್ಯದ 31 ಜಿಲ್ಲೆಗಳಲ್ಲಿ ಗೋಶಾಲೆ ಸ್ಥಾಪನೆ ಹಾಗೂ ಅದರ ಗೋ ಉತ್ಪನ್ನಗಳನ್ನು ಉತ್ಪಾದಿಸುವ ಮೂಲಕ ಸ್ವಾವಲಂಬನೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಅಕ್ರಮ ಗೋ ಕಳ್ಳ ಸಾಗಾಣಿಕೆಗೆ ಕಡಿವಾಣ ಹಾಕಲಾಗುತ್ತಿದೆ. ಗೋರಕ್ಷಣೆ ನಮ್ಮ ಧ್ಯೇಯ ಮತ್ತು ಗುರಿಯಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಮುಖಂಡರಾದ ಮಹಾವೀರ ಹೆಗ್ಡೆ, ಎಂ.ಕೆ. ವಿಜಯಕುಮಾರ್, ಮಣಿರಾಜ ಶೆಟ್ಟಿ, ಜಯರಾಂ ಸಾಲ್ಯಾನ್ , ರೇಶ್ಮಾ ಶೆಟ್ಟಿ, ಬಿಜಿಪಿ ವಕ್ತಾರ ಹರೀಶ್ ಶೆಣೈ ,ಇರ್ವತ್ತೂರು ಉದಯ ಎಸ್. ಕೋಟ್ಯಾನ್, ನವೀನ್ ನಾಯಕ್ ಉಪಸ್ಥಿತರಿದ್ದರು.