ಮೈಸೂರು, ಜ 13(SM): ಸಿಎಂ ಕುಮಾರಸ್ವಾಮಿ ಕ್ಲರ್ಕ್ ಎಂಬ ಪ್ರಧಾನಿ ಅವರ ಹೇಳಿಕೆ ವಿರುದ್ಧ ಇದೀಗ ಸ್ವತಃ ಕುಮಾರಸ್ವಾಮಿಯವರೇ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಇಂದು ಜೆ.ಡಿ.ಎಸ್ ಕಾರ್ಯಕರ್ತರ ಸಭೆಗೂ ಮುನ್ನ ಮಾತನಾಡಿದ ಅವರು, ನರೇಂದ್ರ ಮೋದಿಯವರಿಗೆ ಕುಮಾರಸ್ವಾಮಿ ಕ್ಲರ್ಕ್ ಅಂತ ಹೇಳಿದವರು ಯಾರು? ಮೋದಿಯವರಿಗೆ ನಮ್ಮ ಬಗ್ಗೆ ಭಯವಿದೆ. ಹೀಗಾಗಿ ಈ ರೀತಿಯ ಮಾತುಗಳನ್ನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ನಾನು ಕ್ಲರ್ಕ್ ಆಗಿದ್ದರೆ ಅದನ್ನು ನಾನು ಹೇಳಿಕೊಳ್ಳಬೇಕು. ಅಥವಾ ನಮ್ಮ ಪಕ್ಷದವರೇ ಅದನ್ನು ಹೇಳಬೇಕು. ಅದರ ಬದಲು ತಮಗೆ ಸಂಬಂಧವಿಲ್ಲದೇ ಇರುವುದನ್ನು ಮಾತನಾಡುವ ಬದಲು, ಪ್ರಧಾನಿ ಹುದ್ದೆಗೆ ಗೌರವ ತರುವ ಮಾತುಗಳನ್ನಾಡಲಿ ಎಂದು ಸಿಎಂ ಟಾಂಗ್ ನೀಡಿದ್ದಾರೆ.
ಲೋಕಸಭಾ ಚುನಾವಣೆಗೆ ಸಿದ್ಧತೆಗಳು ಆರಂಬಗೊಂಡಿದೆ. ಯಾರನ್ನು ಅಭ್ಯರ್ಥಿ ಮಾಡಬೇಕು ಎಂದು ಕಾರ್ಯಕರ್ತರ ಅಭಿಪ್ರಾಯ ಕೇಳಲು ಸಭೆ ಕರೆದಿದ್ದೇವೆ. ಚಾಮರಾಜನಗರ ಮತ್ತು ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಮೈಸೂರು ಕ್ಷೇತ್ರ ಜೆ.ಡಿ.ಎಸ್ಗೆ ಬೇಕು ಎಂಬ ಬೇಡಿಕೆ ಇದೆ. ಈ ಕುರಿತಾಗಿ ವರಿಷ್ಠರು ಇನ್ನೂ ತೀರ್ಮಾನ ಕೈಗೊಂಡಿಲ್ಲ. ಎರಡೂ ಪಕ್ಷದವರು ಸಭೆ ಕರೆದು ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.