ಮಂಗಳೂರು, ಜೂ 10 (DaijiworldNews/MS): ಕಾಲ್ನಡಿಗೆಯ ಮೂಲಕ ಹಜ್ ಯಾತ್ರೆಗೆ ಪ್ರಯಾಣ ಬೆಳೆಸಿರುವ ಮಲಪುರಂನ ಯುವಕ ಶಿಹಾಬ್ ಚೋಟ್ಟೂರ್ ಅವರನ್ನು ಜೂನ್ 9, ಗುರುವಾರದಂದು ತಲಪಾಡಿಯಲ್ಲಿ ಮುಸ್ಲಿಂ ಸಮುದಾಯದ ಜನರು ಅದ್ಧೂರಿಯಾಗಿ ಸ್ವಾಗತಿಸಿದರು.
ಜೂ. 2 ರಂದು ಪ್ರಾರಂಭಗೊಂಡ ಇವರ ಪ್ರಯಾಣ 8600 ಕಿಲೋಮೀಟರ್ಗಳನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿ 280 ದಿನಗಳಲ್ಲಿ ( ಒಂಬತ್ತು ತಿಂಗಳು) ಮೆಕ್ಕಾ ತಲುಪಲು ಯೋಜಿಸಿದ್ದಾರೆ. ಸೂಪರ್ ಮಾರ್ಕೆಟ್ ನಡೆಸುತ್ತಿರುವ ಶಿಹಾಬ್ ಸುಮಾರು 10ಕೆಜಿ ತೂಕದ ಲಗೇಜ್ ತನ್ನೊಂದಿಗೆ ಹೊತ್ತು ಹೊರಟಿದ್ದಾರೆ. ದಾರಿಯಲ್ಲಿ ಒದಗಿಸುವ ಉಚಿತ ಆಹಾರ ಹಾಗೂ ಮಸೀದಿಗಳಲ್ಲಿ ಒದಗಿಸುವ ಉಚಿತ ವಸತಿ ಉಪಯೋಗ ಪಡೆದು ಪ್ರಯಾಣ ಆರಂಭಿಸಿದ್ದಾರೆ. ಒಟ್ಟಾರೆ ಭಾರತ , ಪಾಕಿಸ್ತಾನ, ಇರಾನ್ , ಇರಾಕ್ ಕುವೈತ್ ಮತ್ತು ಸೌದಿ ಅರೇಬಿಯಾ ದೇಶದಲ್ಲಿ ಇವರ ಪ್ರಯಾಣ ಸಾಗಲಿದ್ದು ಈ ದೇಶಗಳ ವೀಸಾ ಪಡೆಯಲು ಕೇಂದ್ರ ಸಚಿವ ವಿ. ಮುರಳೀಧರನ್ ಸಹಾಯ ಮಾಡಿದ್ದಾರೆ ಎಂದು ಶಿಯಾಬ್ ಹೇಳಿದ್ದಾರೆ. 2023 ರಲ್ಲಿ ಸೌದಿ ಅರೇಬಿಯಾ ತಲುಪಿದ ನಂತರ ಹಜ್ ಗೆ ಅರ್ಜಿ ಸಲ್ಲಿಸಲಿದ್ದಾರೆ.
ಕೇರಳದಿಂದ ಕಾಲ್ನಡಿಗೆ ಮೂಲಕ ಪ್ರಯಾಣ ಹೊರಟ ಶಿಹಾಬ್ ತಲಪಾಡಿಗೆ ತಲುಪುತ್ತಿದ್ದಂತೆಯೇ ತ ಜಮಾಯಿಸಿದ ಹಲವಾರು ಜನರು ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು.
ಗುರುವಾರ ಮಧ್ಯಾಹ್ನ ಹೊಸಂಗಡಿಯಲ್ಲಿ ಆರೋಗ್ಯ ತಪಾಸಣೆ ನಡೆಸಿ ವಿಶ್ರಾಂತಿ ಪಡೆದು ಪ್ರಯಾಣ ಮುಂದುವರಿಸಿದ್ದರು.ಕೋಟೆಕಾರ್ ಮಸೀದಿ ಬಳಿಯ ಬೀರಿಯಲ್ಲಿ ನಮಾಜ್ ಮಾಡಿದ ನಂತರ ಸಾರ್ವಜನಿಕರು ಅವರಿಗೆ ಪ್ರಯಾಣಕ್ಕೆ ಶುಭ ಹಾರೈಸಿದರು.ಶಿಹಾಬ್ ಅವರನ್ನು ಸ್ವಾಗತಿಸಲು ಹಲವಾರು ಮಂದಿ ನೆರೆದಿದ್ದರು. ತಲಪಾಡಿಯಿಂದ ಬೀರಿನವರೆಗೆ ಜನ ಅವರನ್ನು ಹಿಂಬಾಲಿಸಿದರು. ಹೀಗಾಗಿ ಜನದಟ್ಟಣೆ ಹೆಚ್ಚಾಗಿದ್ದು, ಶಿಹಾಬ್ಗೆ ನಡೆದಾಡಲು ಕಷ್ಟವಾಗಿತ್ತು.
ಶಿಹಾಬ್ ಅವರು ಪಂಪ್ವೆಲ್ನಲ್ಲಿರುವ ತಖ್ವಾ ಮಸೀದಿಯಲ್ಲಿ ಉಳಿಯಲು ಯೋಜಿಸಿದ್ದರು. ಆದರೆ, ಸಮಯಕ್ಕೆ ಸರಿಯಾಗಿ ಮಸೀದಿಯನ್ನು ತಲುಪಲು ಸಾಧ್ಯವಾಗದ ಕಾರಣ ಅವರ ನಡಿಗೆಯಲ್ಲಿ ಅಪಾರ ಜನಸಮೂಹವೇ ನೆರೆದಿತ್ತು. ಹೀಗಾಗಿ ರಾತ್ರಿ ಹನಫಿ ಮಸೀದಿಯಲ್ಲಿ ತಂಗಬೇಕಾಯಿತು.
ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್, ರಾಜ್ಯ ಸಮಿತಿ ಸದಸ್ಯ ಕೆ.ಎಂ.ಅಬೂಬಕರ್ ಸಿದ್ದೀಕ್ ಮೊದಲಾದವರು ಕರ್ನಾಟಕ-ಕೇರಳ ಗಡಿಯಲ್ಲಿ ಸ್ವಾಗತಿಸಿದರು.