ಉಡುಪಿ, ಜೂ 09 (DaijiworldNews/DB): ಆಶಾದಾಯಕ ಬೆಳವಣಿಗೆಯೆಂಬಂತೆ ಹಿಜಾಬ್ ವಿವಾದ ಶುರುವಾದ ಉಡುಪಿ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ದಾಖಲಾತಿ ಪಡೆಯುತ್ತಿರುವ ಮುಸ್ಲಿಂ ಹೆಣ್ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಹಿಜಾಬ್ ತೆಗೆದಿರಿಸಿ ತರಗತಿಯೊಳಗೆ ಹಾಜರಾಗುವುದಾಗಿ ಇವರೆಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ.
ಈ ಕಾಲೇಜಿನ ಆರು ಮಂದಿ ವಿದ್ಯಾರ್ಥಿನಿಯರು ತರಗತಿಯೊಳಗೆ ಹಿಜಾಬ್ ಧರಿಸಲು ಅವಕಾಶ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಅವರ ಕೋರಿಕೆಯನ್ನು ತಳ್ಳಿ ಹಾಕಿತ್ತು. ಹೀಗಾಗಿ ಆರೂ ಮಂದಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ನಿರಾಕರಿಸಿದ್ದಕ್ಕಾಗಿ ಅಂತಿಮ ಪಿಯು ಪರೀಕ್ಷೆಯನ್ನೂ ಬರೆದಿರಲಿಲ್ಲ. ಈ ಘಟನೆಯಿಂದ ಕಾಲೇಜಿನಲ್ಲಿ ಈ ಶೈಕ್ಷಣಿಕ ವರ್ಷಕ್ಕೆ ಮುಸ್ಲಿಂ ವಿದ್ಯಾರ್ಥಿನಿಯ ದಾಖಲಾತಿ ಕಡಿಮೆ ಇರಬಹುದು ಎಂದೇ ಭಾವಿಸಲಾಗಿತ್ತು. ಆದರೆ, ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರಥಮ ಪಿಯುಸಿಗೆ ಇಲ್ಲಿವರೆಗೆ 40 ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ದಾಖಲಾತಿ ಮಾಡಿಕೊಂಡಿದ್ದಾರೆ. ಅಲ್ಲದೆ ಇವರೆಲ್ಲರೂ ತರಗತಿಗೆ ಹಿಜಾಬ್ ತೆಗೆದಿಟ್ಟು ಬರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದ್ದಾರೆ.
253 ಮಂದಿ ವಿದ್ಯಾರ್ಥಿಗಳು ಪ್ರಥಮ ಪಿಯುಸಿಯಿಂದ ದ್ವಿತೀಯ ಪಿಯುಸಿಗೆ ಉತ್ತೀರ್ಣರಾಗಿದ್ದಾರೆ. ಪ್ರಥಮ ಪಿಯುಸಿಗೆ ಈ ಬಾರಿ ಒಟ್ಟು 335 ಮಂದಿ ದಾಖಲಾಗಿದ್ದಾರೆ. ಇನ್ನೂ 100 ಮಂದಿ ದಾಖಲಾತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಎಸೆಸ್ಸೆಲ್ಸಿ ಪೂರಕ ಪರೀಕ್ಷೆ ಮುಗಿದು ಫಲಿತಾಂಶ ಬಂದ ಬಳಿಕ ಉಳಿದ ಸೀಟುಗಳನ್ನು ಭರ್ತಿ ಮಾಡಲಾಗುವುದು ಎಂದು ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷ, ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಹಿಜಾಬ್ ವಿವಾದದಿಂದಾಗಿ ಕೆಲ ದಿನಗಳ ಕಾಲ ಸಂಸ್ಥೆಗೆ ರಜೆ ಸಾರಲಾಗಿತ್ತು. ಅಲ್ಲದೆ, ವಿವಾದದಿಂದಾಗಿ ಸಂಸ್ಥೆಯಲ್ಲಿ ಹಲವು ಗೊಂದಲಗಳು ಸೃಷ್ಟಿಯಾಗಿತ್ತಾದರೂ, ಎಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶವನ್ನು ಸಂಸ್ಥೆ ಪಡೆದುಕೊಂಡಿದೆ. ವಿದ್ಯಾರ್ಥಿನಿ ಗಾಯತ್ರಿ 625 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಶೇ. 50ರಷ್ಟು ವಿದ್ಯಾರ್ಥಿಗಳು ಶೇ. 85ಕ್ಕೂ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.