ಉಡುಪಿ, ಜೂ 09 (DaijiworldNews/MS): ಉಡುಪಿಯ ಕಾರ್ಕಳ ತಾಲೂಕಿನ ಜೋಡುರಸ್ತೆಯ ಕುಲಾಲ ಸಭಾಭವನದಲ್ಲಿ ಈ ಅಪರೂಪದ ಜೋಡಿಯ ವಿವಾಹ ನಡೆದಿದೆ. ಈ ಮದುವೆಯಲ್ಲಿ ವರನ ಎತ್ತರ ಕೇವಲ 4 ಅಡಿ, ವಧುವಿನ ಎತ್ತರ ಕೂಡಾ ಹೆಚ್ಚುಕಡಿಮೆ ಅಷ್ಟೇ. ಆದರೆ ಇದು ಬಾಲ್ಯ ವಿವಾಹವಲ್ಲ, ಬದಲಿಗೆ ಇದೊಂದು ಅಪರೂಪದ ಮದುವೆ.
ವಿವಾಹ ಅನ್ನುವುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಅನ್ನೋದು ಹಿರಿಯರ ವಾಡಿಕೆಯಾಗಿದೆ. ಜೋಡಿ ಸರಿಯಾಗಿದ್ದರೆ ಜೀವನವೇ ಸ್ವರ್ಗವಾಗುತ್ತದೆ. ಅಂತಹ ಅಪರೂಪದ ಜೋಡಿ ಜೋಡಿಯ ವಿವಾಹ ನೆರವೇರಿದೆ.
ಈ ಮುದ್ದಾದ ಜೋಡಿಯ ವರನ ಹೆಸರು ಹರ್ಷಿತ್ ಕುಮಾರ್, ಈತ ಮಾಣಿಯ ಸಿಂಧ್ಯಾ ಚಂದ್ರೋಜಿ ರಾವ್ ಅವರ ಪುತ್ರನಾಗಿದ್ದಾನೆ ಹಾಗೂ ವಧುವಿನ ಹೆಸರು ಶ್ರೀಕೃತಿ, ಈಕೆ ಹಿರಿಯಡ್ಕ ಓಂತಿಬೆಟ್ಟು ದಿ.ಶ್ರೀನಿವಾಸ್ ನಾಯ್ಕ ಅವರ ಪುತ್ರಿಯಾಗಿದ್ದಾಳೆ. ಹಿರಿಯರೇ ನಿಶ್ಚಯಿಸಿ ನಡೆಸಿದ ವಿವಾಹ ಇದಾಗಿದ್ದು, ಮದುವೆ ಮನೆಯಲ್ಲಿ ವಿಶೇಷ ಸಂಭ್ರಮ ಮನೆ ಮಾಡಿತ್ತು. ಎರಡೂ ಕಡೆಯ ಸಂಬಂಧಿಕರು ವಿವಾಹ ಮಂಟಪದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದರು. ಎಲ್ಲರಿಗೂ ವಿಶೇಷ ಆಕರ್ಷಣೆಯಾಗಿ ಕಂಡ ಈ ವಧು-ವರರನ್ನು ನೆಂಟರಿಷ್ಟರು, ಮನದುಂಬಿ ಹರಸಿ ಹಾರೈಸಿದರು.
ಈ ಮದುವೆಯ ವಿಶೇಷ ಅಂದರೆ, ಕುಳ್ಳ ದೇಹದ ಜೋಡಿಯೊಂದು ಸತಿಪತಿಗಳಾಗಿ ವೈವಾಹಿಕ ಜೀವನವನ್ನು ಆರಂಭಿಸಿದ್ದು. ವರ ಹರ್ಷಿತ್ ಖಾಸಗಿ ಉದ್ಯೋಗಿಯಾಗಿದ್ದನು ಹಾಗೂ ವಧು ಶ್ರೀಕೃತಿ ಕೂಡ ಇಷ್ಟು ದಿನ ಖಾಸಗಿ ಉದ್ಯೋಗಿಯಾಗಿದ್ದು, ಇತ್ತೀಚಿಗಷ್ಟೇ ಕೆಲಸ ಬಿಟ್ಟಿದ್ದಾಳೆ. ಈಕೆ ಡ್ಯಾನ್ಸ್ ಕೊರಿಯೋಗ್ರಫಿ ಅನುಭವ ಕೂಡ ಹೊಂದಿದ್ದು ಅತ್ಯಂತ ಪ್ರತಿಭಾನ್ವಿತೆಯಾಗಿದ್ದಾರೆ.
ಕುಳ್ಳರಾಗಿದ್ದರಿಂದ ಈ ಇಬ್ಬರಿಗೂ ಬಂದ ಸಂಬಂಧ ಯಾವುದು ಕೂಡಿ ಬರುತ್ತಿರಲಿಲ್ಲ. ಈ ಹಿಂದೆ ಹಲವು ಸಂಬಂಧಗಳು ಬಂದಿತ್ತಾದರೂ ಅವರಲ್ಲಿ ಎತ್ತರದವರೇ ಆಗಿದ್ದರು. ಹೀಗಾಗಿ ನಿರಾಕರಿಸುತ್ತಲೇ ಬಂದಿದ್ದಾರೆ. ಕೊನೆಗೂ ಇಬ್ಬರಿಗೂ ಸರಿಸಮಾನತೆಯಂತೆ ಸೂಕ್ತ ಜೋಡಿಗಳೇ ಆದರೂ. ಶ್ರೀಕೃತಿ ಹಾಗೂ ಹರ್ಷಿತ್ ಈ ಮದುವೆಯಿಂದ ಬಹಳ ಸಂತೋಷವಾಗಿದ್ದಾರೆ ಎಂದು ಬಂಧುಗಳು ತಿಳಿಸಿದ್ದಾರೆ. ಏನೇ ಆಗಲಿ ಈ ಬಲು ಅಪರೂಪದ ಜೋಡಿ ನೋಡಲು ಬಂದವರು ಖುಷಿಯಿದ ಹರಸಿ ಹಾರೈಸಿ, ಬಲು ಅಪರೂಪದ ಜೋಡಿಯೆಂದು ಸಂತೋಷಪಟ್ಟರು.