ಮಂಗಳೂರು, ಜೂ 09 (DaijiworldNews/MS): ದೇಶದಲ್ಲಿಯೇ ಮೊದಲು ಬ್ಯಾಂಕಿಂಗ್ ಕ್ಷೇತ್ರ ಆರಂಭಗೊಂಡ ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾಂಕುಗಳು ಇಡೀ ರಾಜ್ಯಕ್ಕೆ ದಿಕ್ಸೂಚಿಯಾಗುವಂತೆ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಸಲಹೆ ನೀಡಿದರು.
ಅವರು ಜೂ.8ರ ಬುಧವಾರ ನಗರದ ಉರ್ವಾಸ್ಟೋರ್ನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲೆಯ ರಾಷ್ಟ್ರೀಕೃತ, ಖಾಸಗಿ, ಸ್ಥಳೀಯ ಬ್ಯಾಂಕ್ಗಳು, ನಬಾರ್ಡ್ ಮತ್ತು ಇತರೇ ಸರ್ಕಾರಿ ಇಲಾಖೆಗಳ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಸಾಲ ಸಂಪರ್ಕ ಕಾರ್ಯಕ್ರಮ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜನಸಾಮಾನ್ಯರ ಅಭಿವೃದ್ದಿಗೆ ಸರ್ಕಾರ ಜಾರಿಗೊಳಿಸುವ ಹಲವಾರು ಯೋಜನೆಗಳ ಸಮರ್ಪಕ ಅನುಷ್ಠಾನದಲ್ಲಿ ಬ್ಯಾಂಕುಗಳ ಪಾತ್ರ ಅತಿ ಮುಖ್ಯ, ಬ್ಯಾಂಕುಗಳು ಸಮರ್ಥವಾಗಿ ಕಾರ್ಯನಿರ್ವಹಿಸಿದಾಗ ದೇಶದ ಆರ್ಥಿಕತೆಯಲ್ಲಿ ಬದಲಾವಣೆ ತರಲು ಸಾಧ್ಯ, ಬ್ಯಾಂಕುಗಳ ತವರು ಎನಿಸಿಕೊಂಡ ದಕ್ಷಿಣ ಕನ್ನಡ ಜಿಲ್ಲೆ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳ ಸದ್ಬಳಕೆಯಲ್ಲಿ ಮುಂಚೂಣಿಯಲ್ಲಿದೆ, ಕೋವಿಡ್ ಕಾರಣದಿಂದ ಉತ್ಪಾದನೆ ಹಾಗೂ ಉತ್ಪಾದನಾ ಘಟಕಗಳ ಸಂಖ್ಯೆ ಕಡಿಮೆಯಾಗಿದ್ದು ಇವುಗಳನ್ನು ಪುನರುತ್ಥಾನಗೊಳಿಸುವಲ್ಲಿ ಬ್ಯಾಂಕರ್ಸ್ಗಳ ಜವಬ್ದಾರಿ ಮಹತ್ವಾದ್ದಾಗಿದೆ ಎಂದರು.
ಮುಖ್ಯವಾಗಿ ಬ್ಯಾಂಕ್ಗಳು ಗ್ರಾಹಕ ಸ್ನೇಹಿಯಾಗಬೇಕು. ಕನ್ನಡ ಭಾಷೆಯನ್ನು ಕಲಿಯುವ ಜತೆಗೆ ಸ್ಥಳೀಯ ಭಾಷೆಗಳ ಪರಿಚಯವೂ ಅಧಿಕಾರಿ ಹಾಗೂ ಸಿಬ್ಬಂದಿಗಳಿಗಿರಬೇಕು, ಸ್ಥಳೀಯ ಸಂಸ್ಕೃತಿ, ಸ್ಥಳಗಳ ಬಗ್ಗೆ ಮಾಹಿತಿಯನ್ನು ಹೊಂದಿರಬೇಕು. ಗ್ರಾಹಕರೊಂದಿಗೆ ಉತ್ತಮ ರೀತಿಯಲ್ಲಿ ವ್ಯವಹರಿಸಿ ಬಾಂಧವ್ಯ ಹೊಂದಬೇಕು. ಈ ಬಗ್ಗೆ ಶಾಖಾ ಹಂತದಲ್ಲಿ ಮೇಲಧಿಕಾರಿಗಳು ತಿಳಿವಳಿಕೆ ನೀಡಬೇಕು, ಕೆಲವು ಅಧಿಕಾರಿ, ಸಿಬ್ಬಂದಿ ವರ್ತನೆಯಿಂದ ಬ್ಯಾಂಕ್ಗೆ ಕೆಟ್ಟ ಹೆಸರು ಬರುವಂತೆ ಮಾಡಬಾರದು ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಮಾತನಾಡಿ, ಸಾಲ ಸಂಪರ್ಕ ಎಂಬುದು ಬ್ಯಾಂಕಿಂಗ್ ಸೌಲಭ್ಯಗಳಿಂದ ವಂಚಿತರಾದ ಜನರಿಗೆ ಉತ್ತಮ ವೆದಿಕೆಯಾಗಿದೆ. ದೇಶದ ಆರ್ಥಿಕತೆ ಸದೃಡವಾಗಬೇಕಿದ್ದರೆ ಬ್ಯಾಂಕುಗಳ ಆರ್ಥಿಕತೆ ಸದೃಡವಾಗಿರಬೇಕು ಎಂದು ಅಭಿಪ್ರಾಯಪಟ್ಟರು.
ಯಾವುದೇ ಬ್ಯಾಂಕುಗಳ ಪ್ರಮುಖ ಬಂಡವಾಳ ಗ್ರಾಹಕರು, ಆದ್ದರಿಂದ ಬ್ಯಾಂಕುಗಳು ಗ್ರಾಹಕ ಮಿತ್ರರಾಗುವುದರೊಂದಿಗೆ ಜನರನ್ನು ಸಮಾಜದ ಮುಖ್ಯವಾಹಿನಿಗೆ ಕರೆತಂದು ಅವರು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು, ಕೇಂದ್ರ ಸರ್ಕಾರದ ಯೋಜನೆಗಳನ್ನು ಅತ್ಯುತ್ತಮವಾಗಿ ಅನುಷ್ಟಾನ ಮಾಡುವುದರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಪ್ರಶಸ್ತಿ ಪಡೆದಿದ್ದು, ಈ ವರ್ಷ 416 ಫಲಾನುಭವಿಗಳಿಗೆ ಯೋಜನೆಗಳನ್ನು ನೀಡಲಾಗಿದೆ, ಸುಮಾರು 19 ಸಾವಿರ ಕೋಟಿ ಸಾಲ ಮಂಜೂರಾತಿಯಾಗಿದೆ, ಕೃಷಿ, ವಸತಿ, ಶಿಕ್ಷಣ ಹೀಗೆ ಎಲ್ಲಾ ಕ್ಷೇತ್ರಗಳಿಗೂ ಆದ್ಯತೆ ನೀಡುವುದರೊಂದಿಗೆ ಜಿಲ್ಲೆ ಮುನ್ನಡೆಯಲು ಬ್ಯಾಂಕರ್ಸ್ಗಳು ಕಾರಣರಾಗಿದ್ದಾರೆ, ಸಾಲ ಸೌಲಭ್ಯವನ್ನು ನೀಡುವುದು ಅವರನ್ನು ಆರ್ಥಿಕವಾಗಿ ಬಲಿಷ್ಠರನ್ನಾಗಿಸುವುದರೊಂದಿಗೆ ಸಾಮಾಜಿಕವಾಗಿ ಸದೃಢರನ್ನಾಗಿಸುವಂತೆ ತಿಳಿಸಿದರು.
61 ಸಾವಿರ ಮುದ್ರಾ ಯೋಜನೆಯ ಖಾತೆಯಲ್ಲಿ 15 ಕೋಟಿ ಮಂಜೂರು ಮಾಡಲಾಗಿದೆ, ಜನ್ಧನ್ ಯೋಜನೆಯಲ್ಲಿ 4,62,000 ಖಾತೆ ತೆರೆಯಲಾಗಿದೆ. ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ, ಅಟಲ್ ವಾಜಪೇಯಿ ಯೋಜನೆ ಹಾಗೂ ಇತ್ಯಾದಿಗಳಲ್ಲಿ ಸುಮಾರು 9 ಲಕ್ಷ ಜನರಿಗೆ ವಿಮಾ ಮಾಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಕಿರು ಆಹಾರ ಘಟಕ ಯೋಜನೆಯಲ್ಲಿ 5 ಜನರಿಗೆ 50 ಶೇಕಡ ಸಬ್ಸಿಡಿಯೊಂದಿಗೆ ಸಾಲ ನೀಡಲಾಗುತ್ತಿದೆ ಆ ಮೂಲಕ ಕರ್ನಾಟಕದಲ್ಲಿ ಜಿಲ್ಲೆ 5ನೇ ಸ್ಥಾನದಲ್ಲಿದೆ. ಇದರೊಂದಿಗೆ ಒಂದು ಜಿಲ್ಲೆ, ಒಂದು ಉತ್ಪನ್ನದಡಿಯಲ್ಲಿ ಮೀನು ಉತ್ಪನ್ನಗಳನ್ನು ತಯಾರಿಸುವಲ್ಲಿ ಜಿಲ್ಲೆಯ ಜನರು ಆಸಕ್ತಿ ವಹಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು. ಸಾಧಕ ಬ್ಯಾಂಕ್ಗಳ ಪ್ರಮುಖರನ್ನು ಗೌರವಿಸಲಾಯಿತು.
ಭಾರತೀಯ ರಿಸರ್ವ್ ಬ್ಯಾಂಕ್ ಸಹಾಯಕ ಮಹಾಪ್ರಬಂಧಕ ವೆಂಕಟೇಶ್, ಕೆನರಾ ಬ್ಯಾಂಕ್ ಡಿಜಿಎಂ ರಾಘವ ನಾಯ್ಕ, ಭಾರತೀಯ ಸ್ಟೇಟ್ಬ್ಯಾಂಕ್ನ ಉಪ ಮಹಾಪ್ರಬಂಧಕ ರಾಜೇಶ್ ಗುಪ್ತಾ, ಕರ್ಣಾಟಕ ಬ್ಯಾಂಕ್ ಮಹಾಪ್ರಬಂಧಕ ವಿನಯ ಭಟ್, ಕೆವಿಜಿವಿ ಪ್ರಾದೇಶಿಕ ವ್ಯವಸ್ಥಾಪಕ ಸೂರ್ಯನಾರಾಯಣ, ಐಒಬಿ ಪ್ರಾದೇಶಿಕ ವ್ಯವಸ್ಥಾಪಕ ಅಮಿತ್ ಕುಮಾರ್ ವೇದಿಕೆಯಲ್ಲಿದ್ದರು. ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರವೀಣ್ ಎಂ.ಪಿ. ಸ್ವಾಗತಿಸಿದರು.