ಮಂಗಳೂರು, ಜೂ 09 (DaijiworldNews/MS): ವಿದ್ಯಾರ್ಥಿ ಜೀವನದ ನಿರ್ಣಾಯಕ ಘಟ್ಟವೆಂದು ಪರಿಗಣಿಸುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಯ 18 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳಿಸಿ ಉತ್ತಮ ಸಾಧನೆ ಮಾಡಿರುವುದು ಸಾಕ್ಷರತೆ ಮುಂಚೂಣಿಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಹೆಗ್ಗಳಿಕೆಗೆ ಸಾಕ್ಷಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಅಭಿಪ್ರಾಯಪಟ್ಟರು.
ಅವರು ಜೂ.08ರ ಬುಧವಾರ ನಗರದ ಜಿಲ್ಲಾ ಪಂಚಾಯತ್ನ ಮಿನಿ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳಿಸಿದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ಬದುಕಿನ ಅತ್ಯಂತ ಮಹತ್ವದ ಘಟ್ಟವಾಗಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ಛಲ, ನಿರ್ದಿಷ್ಟ ಗುರಿ, ಗುರು ಹಾಗೂ ಪೋಷಕರ ಸಹಕಾರ ಅತಿ ಅಗತ್ಯ, ಶ್ರಮವಹಿಸಿ ಪರೀಕ್ಷೆಯಲ್ಲಿ ಅದನ್ನು ಸಾಬೀತು ಮಾಡಿರುವ 18 ವಿದ್ಯಾರ್ಥಿಗಳಿಗೆ ಅಭಿನಂದಿಸಿದ ಅವರು, ಕೋವಿಡ್-19 ಸೋಂಕು, ಆನ್ಲೈನ್ ಕ್ಲಾಸ್ ಇತ್ಯಾದಿ ಸವಾಲುಗಳನ್ನು ಎದುರಿಸಿಯೂ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿರುವುದಕ್ಕೆ ಅವರು ಹರ್ಷ ವ್ಯಕ್ತಪಡಿಸಿದರು.
ಎಸ್.ಎಸ್.ಎಲ್.ಸಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಪಿ.ಯು.ಸಿಯಲ್ಲಿ ಇಂಗ್ಲಿಷ್ ಭಾಷೆಯ ಕಾರಣ ತಮ್ಮ ಧೈರ್ಯ ಹಾಗೂ ಆತ್ಮವಿಶ್ವಾಸವನ್ನು ಬಿಡಬಾರದು, ಇಂಗ್ಲೀಷ್ ಭಾಷೆ ಒಂದು ಮಾದ್ಯಮವಷ್ಟೆ, ಹೆಚ್ಚು ಪ್ರಯತ್ನಿಸಿ ಆ ಭಾಷೆಯನ್ನು ಕಲಿತುಕೊಳ್ಳಬೇಕು, ಅದರ ಹೊರತು ಒತ್ತಡ ಹಾಗೂ ನಿರಾಸಕ್ತಿಗೆ ಒಳಗಾಗಬಾರದು ಭಾಷಾ ಮಾಧ್ಯಮ ಬದಲಾಗುವುದರಿಂದ ಆರಂಭದಲ್ಲಿ ಪ್ರಥಮ ಪಿ.ಯು.ಸಿಯಲ್ಲಿ ಕೆಲ ಸಮಸ್ಯೆ ಎದುರಾಗಬಹುದು, ಸಹಜ ಅಭ್ಯಾಸ ಬಲದಿಂದ ಅದನ್ನು ಸುಧಾರಿಸಿಕೊಳ್ಳಬೇಕು ಎಂದ ಅವರು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಾವುದಾದರೊಂದು ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಯೊಂದನ್ನು ಅಭ್ಯಾಸ ಮಾಡಿಕೊಳ್ಳಬೇಕು, ಅದು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ, ವಿದ್ಯಾರ್ಥಿಗಳು ಸಾಮಾಜಿಕ ಕಾಳಜಿಯುಳ್ಳವರಾಗಿ ಬೆಳೆಯಬೇಕು, ಮಹಿಳೆಯರು, ಪಾಲಕರು, ವಯಸ್ಸಾದವರು, ದುರ್ಬಲರ ಬಗ್ಗೆ ಗೌರವವಿಟ್ಟುಕೊಳ್ಳಬೇಕು, ಮುಂದೆ ನಾಗರೀಕ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಮಾತನಾಡಿ, ಅಂಕಗಳಿಕೆಯೊಂದಿಗೆ ಇನ್ನುಮುಂದೆ ಸಮಾಜದಲ್ಲಿ ಜವಾಬ್ದಾರಿಯೂ ಕೂಡ ಹೆಚ್ಚಿದೆ, ಪಿ.ಯು.ಸಿಯಲಿಯೂ ಕೂಡ 600 ಅಂಕಗಳಿಸಿ ಈ ಸಾಧನೆಯನ್ನು ಮುಂದುವರಿಸುವಂತೆ ಕಿವಿ ಮಾತು ಹೇಳಿದರು.
ಜೀವನದಲ್ಲಿ ಎದುರಿಸುವ ಪ್ರತಿಯೊಂದು ದಿನವೂ ಪರೀಕ್ಷೆ ಇದ್ದಂತೆ ಇಲ್ಲಿ ಸಿದ್ದಾಂತ ಹಾಗೂ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಕಲಿಯುತ್ತಾ ಹೋಗಬೇಕು, ಆ ಮೂಲಕ ಹೆತ್ತವರಿಗೆ ಒಳ್ಳೆಯ ಹೆಸರು ತಂದುಕೊಡಬೇಕು, ದೇಶಕ್ಕೆ ಸತ್ಪ್ರಜೆಗಳಾಗಿ ಬಾಳಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುಧಾಕರ್, ಕ್ಷೇತ್ರ ಶಿಕ್ಷಣಾಧಿಕಾರಿ, 625 ಅಂಕಗಳಿಸಿದ ಸುಜಯ್, ಧನ್ಯಶ್ರೀ, ರೋಷನ್, ಮಧುಶ್ರೀ, ಅಕ್ಷತಾ ಕಾಮತ್, ವಿಕ್ಷಾ ವಿ.ಶೆಟ್ಟಿ, ಶ್ರೀಜಾ ಹೆಬ್ಬಾರ್, ಸ್ವಾತಿ, ಇಂದಿರಾ ಅರುಣ್, ಶ್ರೇಯಾ ಆರ್. ಶೆಟ್ಟಿ, ಸುದೀಶ್ ದತ್ತಾತ್ರೇಯ, ಇರಯ್ಯ ಶ್ರೀಶೈಲ್, ಕಲ್ಮೇಶ್ವರ್ ಪುಂಡಲೀಕ ನಾಯ್ಕ್, ಅಭಯ್ ಶರ್ಮಾ, ಅಭಿಜ್ಞಾ ಆರ್., ಆತ್ಮೀಯಾ ಎಂ. ಕಶ್ಯಪ್, ಸಾತ್ವಿಕ್, ಮಹಮದ್ ಅಬಿದ್ ಅಲಿ, ಅವರ ಪೋಷಕರು ಹಾಗೂ ಸಂಬಂಧಿಸಿದ ಶಾಲೆಗಳ ಶಿಕ್ಷಕರು ಈ ಸಂದರ್ಭದಲ್ಲಿದ್ದರು.