ಉಡುಪಿ, ಜೂ 09 (DaijiworldNews/MS): ಉಡುಪಿಯಲ್ಲಿ ಹುಟ್ಟಿಕೊಂಡ ಹಿಜಾಬ್ ವಿವಾದ ಸಾಮಾನ್ಯ ವಿಚಾರ ಅಲ್ಲ. ಹಿಜಬ್ ಕೇವಲ ಬಟ್ಟೆಯ ದೃಷ್ಟಿಯಿಂದ ವಿವಾದ ಮಾಡಿದ್ದಲ್ಲ. ಇದು ದೇಶ ವಿಭಜನೆಯ ಕಾರಣವಾಗುವ ವಿವಾದವಾಗಿದ್ದು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು, ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಬುಧವಾರ ನಡೆದ ಧರ್ಮ ವೇದಿಕೆಯಲ್ಲಿ ವಿಶೇಷ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದರು.
ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದು ವಿವಾದಕ್ಕೀಡಾಗುವುದಕ್ಕಿಂತ, ಹಿಂದು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿದ್ದು ಹೆಚ್ಚು ವಿವಾದಕ್ಕೆ ಕಾರಣವಾಗಿತ್ತು. ಹಿಂದೂ ಸಮಾಜ ಪ್ರತಿಕ್ರಿಯೆ ನೀಡಬೇಕು. ನಾವು ಹೀಗೆ ಮುಂದುವರಿಯಲು ಬಿಡುವುದಿಲ್ಲ ಎಂದು ಸವಾಲು ಹಾಕಿದ್ದೇ ಹಿಜಾಬ್ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು. ಯಾಕೆಂದರೆ ಕೆಲವರಿಗೆ ಕೇಸರಿ ಅಂದರೆ ತುರಿಕೆ ಬರುತ್ತದೆ. ಹಿಂದೂ ಸಮಾಜ ಸುಮ್ಮನೆ ಪ್ರತಿಕ್ರಿಯೆ ನೀಡದೆ ಕೂತಿದ್ದೇ ಭಾರತ ವಿಭಜನೆಗೆ ಕಾರಣವಾಯಿತು. ಅಂದರೆ ಎಲ್ಲಿಯವರೆಗೆ ಸಹನೆಯಿಂದ ಕಾಯಬೇಕು ಎಂದು ಪ್ರಭಾಕರ್ ಭಟ್ ಪ್ರಶ್ನಿಸಿದರು.
ಇವತ್ತಿನ ಪರಿಸ್ಥಿತಿಯಲ್ಲಿ ರಾಕ್ಷಸರ ದಮನ ಮಾಡಲು ಹೆಚ್ಚು ಹೆಚ್ಚು ಮಹಿಷಮರ್ದಿನಿ ಅವಶ್ಯಕತೆ ಇದೆ. ಅವಳು ಮಾಡಿದ್ದು ವಧೆ, ಕೊಲೆಯಲ್ಲ ಎಂದರು.
ಧರ್ಮದ ಬಗ್ಗೆ ಪ್ರಶ್ನೆ ಮಾಡಿ ಮೂರು ಬಾರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವರಿಗೆ ಸರಿಯಾದ ಉತ್ತರ ವನ್ನು ಕೊಟ್ಟಿದೆ. ಧರ್ಮ ಮತ್ತು ರಿಲಿಜಿಯನ್ ಒಂದೇ ಅಲ್ಲ. ಧರ್ಮ ಅಂದರೆ ಅದು ನಾವು ಬದುಕುವ ರೀತಿ. ರಿಲಿಜಿಯನ್ ಎಂದರೆ ಆರಾಧನೆ ಮಾಡುವ ರೀತಿ. ಜಗತ್ತಿನಲ್ಲಿ ಒಂದೇ ಶ್ರೇಷ್ಠ ಧರ್ಮ ಅದು ಹಿಂದು ಧರ್ಮ. ಅದನ್ನು ಹೆಚ್ಚು ಹೆಚ್ಚು ಅರ್ಥ ಮಾಡಿಕೊಳ್ಳಬೇಕು. ದುರಾದೃಷ್ಟವಶಾತ್, ಸರಿಯಾಗಿ ಅರ್ಥ ಮಾಡಿಕೊಳ್ಳದೆ ಎಲ್ಲವನ್ನೂ ಒಟ್ಟಾಗಿ ಜೋಡಿಸಲು ಹೊರಟಿದ್ದಾರೆ.
ಸರ್ವಧರ್ಮ ಸಮ್ಮೇಳನದಲ್ಲಿ ಸರ್ವ ಧರ್ಮವೇ ಇಲ್ಲ. ಅನ್ಯ ಧರ್ಮದವರು, ಒಂದೇ ದೇವರು ಎಂದು ಹೇಳುವವರ ಕೈಯಿಂದ ಭಾಷಣ ಮಾಡಿಸುತ್ತಾರೆ. ಇದು ನಾಚಿಕೆಗೇಡಿನ ವಿಷಯ. ಹಿಂದೂಗಳಿಗೆ ಇಂತಹದ್ದೇ ದೇವರು ಹೀಗೆಯೇ ಆರಾಧಿಸಬೇಕು ಎನ್ನುವ ನಿಯಮ. ನಾವು ಸಮಾಜದ ಒಳಿತಿಗಾಗಿ ಪೂಜೆ ಮಾಡುತ್ತೇವೆ ಎಂದರು.
ಇನ್ನು ಧರ್ಮ ವೇದಿಕೆಯನ್ನು ಉದ್ಘಾಟಿಸಿದ, ಪಲಿಮಾರು ಮಠದ ಸ್ಮಾಮೀಜಿಗಳಾದ ಶ್ರೀ ವಿದ್ಯಾಧೀಶ ತೀರ್ಥರು ತಮ್ಮಆಶೀರ್ವಚನದಲ್ಲಿ, 'ಭಗವಂತ ಎಂದರೆ ತಂದೆ, ಕಡಿಯಾಳಿ ದೇವಿ ಎಂದರೆ ಎಲ್ಲರ ಅಮ್ಮ. ಮನುಷ್ಯ ತನ್ನ ಅಹಂ ಭಾವ ಬಿಡಬೇಕು. ಅವನ ಮನಸ್ಸಿನ ಕೊಳೆಯನ್ನು ತೆಗೆದು ಹಾಕುವ ಶಕ್ತಿ ಅವಳಲ್ಲಿದೆ. 'ತಾನು' ಎನ್ನುವುದು ಬಿಟ್ಟು 'ನೀನು' ಎಂದು ದೇವಿಯನ್ನು ಅರಸಿ ಬಂದರೆ , ತಾಯಿ ರಕ್ಷಣೆ ಮಾಡುತ್ತಾಳೆ. ದೇವಸ್ಥಾನ ಎಂದರೆ ಅದು ನ್ಯಾಯಾಲಯವಿದ್ದಂತೆ, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಉಡುಪಿ ಶ್ರೀ ಕೃಷ್ಣ ಮಠಕ್ಕೂ , ಕಡಿಯಾಳಿ ದೇವಸ್ಥಾನ ಕ್ಕೂ ಅವಿನಾಭಾವ ನಂಟಿದೆ. ಇಂದಿಗೂ ಆ ಹಳೆಯ ಸಂಪ್ರದಾಯ ನಡೆದುಕೊಂಡು ಬಂದಿದೆ. ಉಗ್ರಗಾಮಿ, ಪಾದ್ರಿಗಳನ್ನು ದೇವರ ಕಡೆಗೆ ತಿರುಗಿಸಿ ಎಲ್ಲೆಡೆ ಶಾಂತಿ ನೆಲೆಗೊಳ್ಳುವಂತಾಗಲಿ ಎಂದು ಹರಸಿದರು.
ಬಂಟ್ವಾಳ ಒಡಿಯೂರು ಮಠದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ತಮ್ಮ ಆಶೀರ್ವಚನದಲ್ಲಿ, ' ಕಡಿಯಾಳಿ ದೇವಸ್ಥಾನದಲ್ಲಿ ಮರದಿಂದ ಕೆತ್ತಿದ ತಿರುಗುವ ಮುಚ್ಚಿಗೆ ಕ್ರಿಯಾಶೀಲತೆಯನ್ನು ತೋರಿಸುತ್ತದೆ. ಈಗಿನ ಪರಿಸ್ಥಿತಿಯಲ್ಲಿ ನಾವು ಇನ್ನಷ್ಟು ಜಾಗೃತರಾಗಬೇಕು. ರಕ್ಕಸರ ಸಂಹಾರಕ್ಕೆ ತಾಯಿ ದೇವಿ ಎದ್ದು ನಿಲ್ಲಬೇಕು. ಎಲ್ಲರೂ ಹಿಂದೂ ಸಮಾಜದ ಮೇಲೆ ಸವಾರಿ ಮಾಡುತ್ತಿದ್ದಾರೆ. ರಾಷ್ಟ್ರದ ರಕ್ಣಣೆಗೆ ಕಟಿಬದ್ದರಾಗಬೇಕು. ಶಿಕ್ಷಣ ಕೇಂದ್ರಗಳು ಧರ್ಮ ಶಿಕ್ಷಣ ಕೊಡುವ ಕೇಂದ್ರಗಳಾಗಬೇಕು, ಎಂದು ಎಚ್ಚರಿಸಿದರು.
ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರು, ಡಾl. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್, ಪ್ರವರ್ತಕರಾದ ನಾಡೋಜ ಜಿ. ಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ, ಉಡುಪಿಯ ಶಾಸಕರಾದ ಕೆ. ರಘುಪತಿ ಭಟ್, ಆದಿತಿ ಬಿಲ್ಡರ್ಸ್ ಉಡುಪಿಯ ರಂಜನ್ ಕೆ, ಎ.ಕೆ ಡೆವಲಪರ್ಸ್ ಉಡುಪಿಯ ಕರುಣಾಕರ ಶೆಟ್ಟಿ, ನಗರಸಭಾ ಸದಸ್ಯರಾದ ಸವಿತಾ ಹರೀಶ್ ರಾಮ್, ನಗರ ಸಭೆಯ ನಾಮ ನಿರ್ದೇಶಿತ ಸದಸ್ಯರಾದ ಅರುಣಾ ಎಸ್ ಪೂಜಾರಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ನಾಗೇಶ್ ಹೆಗ್ಡೆ, ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ರವಿರಾಜ್ ಆಚಾರ್ಯ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ನಾಗೇಶ್ ಹೆಗ್ಡೆ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ರಾಘವೇಂದ್ರ ಕಿಣಿ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಕೆ. ಮಂಜುನಾಥ್ ಹೆಬ್ಬಾರ್ ಉಪಸ್ಥಿತರಿದ್ದರು.