ಸುಳ್ಯ, ಜೂ 08 (DaijiworldNews/SM): ಸುಳ್ಯದ ಮೊಗರ್ಪಣೆಯಲ್ಲಿ ರವಿವಾರ ರಾತ್ರಿ ನಡೆದ ಶೂಟೌಟ್ ಪ್ರಕರಣದ ಶಂಕಿತ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
ಸುಳ್ಯ ಜಯನಗರದ ಮಹಮ್ಮದ್ ಶಾಹಿ ಎಂಬವರು ಮೊಗರ್ಪಣೆ ವೆಂಕಟರಮಣ ಸೊಸೈಟಿಯ ಬಳಿ ತನ್ನ ಕಾರಿಗೆ ಹತ್ತುತ್ತಿರುವ ಸಂದರ್ಭದಲ್ಲಿ ಸ್ಕಾರ್ಪಿಯೋ ವಾಹನದಲ್ಲಿ ಬಂದ ಅಪರಿಚಿತರು ಶೂಟ್ ಮಾಡಿ ಹೋಗಿದ್ದರು. ಅದೃಷ್ಟವಶಾತ್ ಗುಂಡು ಶಾಹಿಗೆ ತಾಗದೆ ಕಾರಿಗೆ ತಾಗಿ ಕಾರು ಜಖಂ ಆಗಿತ್ತು. ಶೂಟೌಟ್ ನಡೆಸಿದ ಆರೋಪಿಗಳ ಪತ್ತೆಗೆ ಪೊಲೀಸರು ಪ್ರಯತ್ನ ಆರಂಭಿಸಿದ್ದರು. ಇದೀಗ ಶೂಟೌಟ್ ನಡೆಸಿದ ಶಂಕೆಯ ಮೇರೆಗೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿರುವುದಾಗಿ ಹೇಳಲಾಗಿದೆ.
ಸಂಪಾಜೆಯ ಬಾಲಚಂದ್ರ ಕಳಗಿಯವರ ಕೊಲೆ ಆರೋಪಿಗಳಲ್ಲಿ ಕೆಲವರು ಸೇರಿ ಮಹಮ್ಮದ್ ಶಾಹಿ ಮೇಲೆ ಗುಂಡು ಹಾರಿಸಿದ್ದರೆಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿರುವುದಾಗಿ ಹೇಳಲಾಗಿದೆ. ಮಹಮ್ಮದ್ ಶಾಹಿ ಮತ್ತು ಬಾಲಚಂದ್ರ ಕಳಗಿಯವರ ಹಂತಕರು ಸ್ನೇಹಿತರಾಗಿದ್ದು, ಇದೀಗ ಸ್ನೇಹಿತರ ಮಧ್ಯೆ ಬಂದಿರುವ ಭಿನ್ನಾಭಿಪ್ರಾಯದಿಂದಾಗಿ ಈ ಕೃತ್ಯ ನಡೆದಿರಬಹುದಾದ ಸಾಧ್ಯತೆ ಇದೆ ಎಂದು ಪೊಲೀಸರಿಗೆ ಮಾಹಿತಿ ದೊರೆತಿದೆ ಎನ್ನಲಾಗಿದ್ದು, ಪೊಲೀಸರು ಆ ದಿಸೆಯಲ್ಲಿ ತನಿಖೆ ನಡೆಸುತ್ತಿದ್ದಾರೆ.