ಬಂಟ್ವಾಳ, ಜೂ 08 (DaijiworldNews/DB): ಕೊರಗ ಸಮುದಾಯವನ್ನು ಯಾವುದೇ ಕಾರಣಕ್ಕೂ ಇನ್ನೊಂದು ವರ್ಗದ ಜೊತೆ ಸೇರಿಸಿಕೊಳ್ಳದೆ ಪ್ರತ್ಯೇಕವಾಗಿ ಸರ್ಕಾರದ ಯೋಜನೆ ಸವಲತ್ತು ಸಿಗುವಂತಾಗಬೇಕು. ಈ ಮೂಲಕ ನಮಗೂ ಶಾಶ್ವತ ಬದುಕು ಕಟ್ಟಿಕೊಳ್ಳಲು ಅಧಿಕಾರಿಗಳು ಮುಂದಾಗಬೇಕು ಎಂದು ಕೊರಗ ಸುಮುದಾಯದ ಮುಖಂಡರು ಆಗ್ರಹಿಸಿದ್ದಾರೆ.
ಬಂಟ್ವಾಳ ತಾಲೂಕು ಪಂಚಾಯತ್ ನ ಎಸ್ಜಿಎಸ್ಆರ್ವೈ ಸಭಾಂಗಣದಲ್ಲಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಕೊರಗ ಸಮುದಾಯದ ಕುಂದುಕೊರತೆಗಳ ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ಕೊರಗ ಸಮುದಾಯದ ಮುಖಂಡ ಸುಂದರ ಬೆಳುವಾಯಿ, ಜಿಲ್ಲಾಡಳಿತದ ಅಂಕಿ-ಅಂಶದನ್ವಯ ದ.ಕ. ಜಿಲ್ಲೆಯಲ್ಲಿ ಪ್ರಸ್ತುತ ಕೊರಗ ಸಮುದಾಯದ ಜನಸಂಖ್ಯೆ ಇಳಿಮುಖವಾಗುತ್ತಿದ್ದು, ಮುಂದಿನ 10ರಿಂದ 15 ವರ್ಷದಲ್ಲಿ ಇನ್ನಷ್ಟು ನಶಿಸಿ ಹೋಗುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಬಂಟ್ವಾಳ ತಾಲೂಕಿನಲ್ಲಿ ಕೇವಲ 572 ಮಂದಿಯಷ್ಟೆ ಜನಸಂಖ್ಯೆ ಇದ್ದು, ನಮ್ಮ ಸಮುದಾಯದ ಅಧ್ಯಯನ ನಡೆಸಿ ಜಿಲ್ಲಾಡಳಿತಕ್ಕೆ ಸಲ್ಲಿಕೆಯಾದ ಡಾ. ಮಹಮ್ಮದ್ ಫಿರ್ ವರದಿ ಇನ್ನು ಸಮಗ್ರವಾಗಿ ಕಾರ್ಯರೂಪಕ್ಕೆ ಬಂದಿಲ್ಲ ಎಂದರು. ಮುಖಂಡ ಸಂಜೀವ ಅವರು ಇದಕ್ಕೆ ಧ್ವನಿಗೂಡಿಸಿದರು.
ನಮ್ಮ ಹಿರಿಯರ ಕಾಲದಿಂದಲು ನಮ್ಮಲ್ಲಿ ಯಾವುದೇ ಮೂಲಭೂತವಾದ ದಾಖಲೆಗಳಿಲ್ಲ. 30 ವರ್ಷದಿಂದೀಚೆಗೆ ನಮ್ಮ ಯುವ ಪೀಳಿಗೆ ಶಿಕ್ಷಣದತ್ತ ಮುಖಮಾಡುತ್ತಿದೆ. ಅಧಿಕಾರಿಗಳು ಇಂತಹ ಸಭೆ ನಡೆಸಿ ಸಮಸ್ಯೆಗಳನ್ನು ಅರಿತುಕೊಂಡು ಅನುಷ್ಠಾನಕ್ಕೆ ಮುಂದಾದಾಗ ಆ ಅಧಿಕಾರಿ ವರ್ಗಾವಣೆಯಾಗಿ ತೆರಳುತ್ತಾರೆ. ಮತ್ತೆ ನಮ್ಮ ಸಮಸ್ಯೆಗಳು ಹಾಗೆ ಉಳಿಯುತ್ತದೆ. ಹೊಸ ಅಧಿಕಾರಿಗಳು ಬಂದಾಗ ಪುನರಪಿ ಅವರಿಗೆ ಸಮಸ್ಯೆ ವಿವರಿಸಬೇಕಾಗುತ್ತದೆ. ಹಾಗಾಗಿ ನಮ್ಮ ಸಮಸ್ಯೆಗಳು ಕೇವಲ ಚರ್ಚೆಗೆ ಸೀಮಿತವಾಗಿ ಪರಿಹಾರ ಕಾಣದೆ ವರ್ಷಾನುಗಟ್ಟಲೆಯಿಂದ ಹಾಗೆ ಉಳಿದಿದೆ ಎಂದು ಸುಂದರ ಬೆಳುವಾಯಿ ಅಳಲು ತೋಡಿಕೊಂಡರು.
ಗುಂಪು ಸಭೆ ನಡೆಸಿ
ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಗ್ರಾಮ ಮಟ್ಟದಲ್ಲೇ ಮಾಸಿಕವಾಗಿ ಗುಂಪು ಸಭೆ ನಡೆಸಿದರೆ ಸ್ಥಳೀಯವಾಗಿ ಸಮಸ್ಯೆ ಪರಿಹಾರ ಕಾಣಲು ಸಾಧ್ಯ. ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸುವ ಅಧಿಕಾರಿಗಳು ನಮ್ಮ ಸಮಸ್ಯೆಯ ವಾಸ್ತವಾಂಶ ಅರಿತುಕೊಂಡು ಪರಿಹಾರ ನೀಡಬೇಕು ,ಆದರೆ ಮೂಲಭೂತ ದಾಖಲೆಗಳನ್ನು ಕೇಳಿದರೆ ನಮ್ಮಿಂದ ಸಿಗದು ಎಂದು ಅವರು ತಹಶೀಲ್ದಾರ್ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಡಾ. ಸ್ಮಿತಾರಾಮು, ಗ್ರಾಮ ವಾಸ್ತವ್ಯ ಮಾದರಿಯಲ್ಲಿ ಸಭೆ ನಡೆಸಿ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಸಮುದಾಯ ಭವನ ಮರೀಚಿಕೆ
ಕೊರಗ ಸಮುದಾಯ ಜನರು ಒಂದೆಡೆ ಸೇರಿ ತಮ್ಮ ಸಮಸ್ಯೆಗಳನ್ನು ಚರ್ಚಿಸುವ ನಿಟ್ಟಿನಲ್ಲಿ ಕೊರಗ ಸಮುದಾಯ ಭವನ ನಿರ್ಮಾಣಕ್ಕೆ ಬಿ.ಸಿ.ರೋಡಿನ ರೈಲ್ವೇ ನಿಲ್ದಾಣದ ಬಳಿ ಜಮೀನು ಗುರುತಿಸಲಾಗಿತ್ತಲ್ಲದೆ ಇದಕ್ಕೆ ಮಂಜೂರಾದ ಅನುದಾನಕ್ಕೆ ಕ್ರಿಯಾಯೋಜನೆಯನ್ನು ತಯಾರಿಸಲಾಗಿತ್ತು. ಆದರೆ ಈ ಸಮುದಾಯ ಭವನ ನಮ್ಮ ಪಾಲಿಗೆ ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ. ಪ್ರತಿ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗುವುದು ಬಿಟ್ಟರೆ ಅದು ಯಾವ ಹಂತದಲ್ಲಿದೆ ಎಂಬ ಯಾವುದೇ ಮಾಹಿತಿ ಸಿಗುತ್ತಿಲ್ಲ ಎಂದು ಮುಖಂಡ ಸಂಜೀವ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕೊರಗ ಸಮುದಾಯಕ್ಕೆ ಗುರುತಿಸಲಾಗುವ ಜಮೀನು ಕೊನೆಗಳಿಗೆಯಲ್ಲಿ ಉಳ್ಳವರ ಪಾಲಾಗುತ್ತಿರವ ಬಗ್ಗೆ ಉದಾಹರಣೆ ಸಹಿತ ಸಭೆಯ ಗಮನ ಸೆಳೆದ ಸುಂದರ ಬೆಳುವಾಯಿ, ನಮ್ಮ ಸಮುದಾಯಕ್ಕೆ ಕೃಷಿ ಜಮೀನು ಸಿಗುವವರೆಗೂ ಹೋರಾಟ ನಡೆಸಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು. ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ, ಅವಕಾಶ ಇದ್ದರೆ ಸೂಕ್ತವಾದ ವ್ಯವಸ್ಥೆ ಕಲ್ಪಿಸುವುದಾಗಿ ತಾ.ಪಂ. ಇ.ಒ.ರಾಜಣ್ಣ ಭರವಸೆ ನೀಡಿದರು. ಆಯುಷ್ಮಾನ್ ಕಾಡ್೯ ಹೊಂದಿರುವ ರೋಗಿಗಳು ವೆನ್ಲಾಕ್ ಆಸ್ಪತ್ರೆಗೆ ದಾಖಲಾದರೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂದು ಇದೇ ವೇಳೆ ಗಮನ ಸೆಳೆದರು.
ಸಭೆ ಕಾಟಾಚಾರಕ್ಕಾಗದಿರಲಿ
ಕೊರಗರ ಸಮಸ್ಯೆ ಗಳ ಬಗ್ಗೆ ಕಳೆದ ಹತ್ತು ವರ್ಷಗಳಿಂದ ಚರ್ಚಿಸುತ್ತಲೇ ಬಂದಿದ್ದೇವೆ. ಕೆಲವು ಸಮಸ್ಯೆಗಳ ಬಗ್ಗೆ ಲಿಖಿತ ಅರ್ಜಿಯನ್ನೂ ನೀಡಲಾಗಿದೆ. ಆದರೆ ಯಾವುದೇ ಪ್ರಯೋಜನ ವಾಗಿಲ್ಲ. ಈ ಸಭೆ ಕೇವಲ ಕಾಟಾಚಾರಕ್ಕೆ ನಡೆಸದೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಅಧಿಕಾರಿಗಳಿಂದ ಆಗಬೇಕು ಎಂದು ಬಾಬು ಬಾಳೆಪುಣಿ ಮನವಿ ಮಾಡಿದರು.
ಬೋಳಂತೂರು ಗ್ರಾಮದ ನಾರಾಯಣಕೋಡಿ ಎಂಬಲ್ಲಿ ಟಾಂಕಿ, ಪೈಪ್ ಲೈನ್ ಎಲ್ಲವು ಆಗಿದೆ. ಆದರೆ ನೀರು ಮಾತ್ರ ಪೂರೈಕೆಯಾಗುತ್ತಿಲ್ಲ. ಮಂಗಳವಾರ ಸಂಜೆ ಪಂಚಾಯತ್ ನಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿದೆ. ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ಕೃಷಿ ಚಟುವಟಿಕೆಗೂ ತೊಂದರೆಯಾಗಿದೆ ಎಂದು ಸ್ಥಳೀಯ ಮಹಿಳೆಯೋರ್ವರು ಹೇಳಿದರು.
ಸುಂದರಿ, ಬಾಗಿ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಜಯಶ್ರೀ ಉಪಸ್ಥಿತರಿದ್ದರು.