ಉಡುಪಿ, ಜೂ 08 (DaijiworldNews/DB): ಬಿಜೆಪಿಯವರು ಕೆಪಿಸಿಸಿ ಕಚೇರಿಗೆ ಚಡ್ಡಿ ಕಳಿಸುತ್ತಿದ್ದಾರೆ. ಜಿಲ್ಲಾ ಕಚೇರಿಗೆ ಕಳಿಸಿದ್ದರೆ ಸೂಕ್ತ ಬಟವಾಡೆ ಮಾಡುತ್ತಿದ್ದೆವು. ನಮ್ಮ ಕೈಗೆ ಇನ್ನೂ ಚಡ್ಡಿ ಸಿಗಲಿಲ್ಲ. ಸಿಕ್ಕಿದರೆ ಬಟವಾಡೆ ಮಾಡುತ್ತೇವೆ. ತಮ್ಮ ಲೋಪದೋಷಗಳನ್ನು ಮುಚ್ಚಿಹಾಕಲು ಚಡ್ಡಿ ಅಭಿಯಾನ ಮಾಡುತ್ತಿದ್ದಾರೆ. ಪ್ರಗತಿಪರವಾದ ಕರಾವಳಿ ಜಿಲ್ಲೆಯನ್ನು ಪ್ರಯೋಗಶಾಲೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಬಿಜೆಪಿ ವಿರುದ್ದ ಹರಿಹಾಯ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಜಿಲ್ಲೆ ಶಿಕ್ಷಣದಲ್ಲಿ ನಂಬರ್ -1 ಜಿಲ್ಲೆಯಾಗಿತ್ತು. ಇಂತಹ ಜಿಲ್ಲೆಯಲ್ಲಿ ಹಿಜಾಬ್ ವಿವಾದ ಮಾಡಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡು ಹೋದರು. ರಾಜ್ಯದ ವಿದ್ಯಾಂಗ ಇಲಾಖೆ ಏನು ಮಾಡುತ್ತಿದೆ? ಮುಂದಿನ ಚುನಾವಣೆಗೋಸ್ಕರ ಹೀಗೆಲ್ಲ ಮಾಡುತ್ತಿದ್ದಾರೆ . ಆತ್ಮಹತ್ಯೆ ಮಾಡಿಕೊಳ್ಳುವವರು ಕೂಡ ಉಡುಪಿ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದರು.
ಸಿದ್ದರಾಮಯ್ಯ ಏನು ಮಾಡಿದರೂ ತೂಕ ಇದೆ. ಸಿದ್ದರಾಮಯ್ಯ ಹೇಳಿಕೆಗೆ ಜಿಲ್ಲಾ ನಾಯಕರು ಪ್ರತಿಕ್ರಿಯೆ ಕೊಡುವುದಿಲ್ಲ. ಸಿದ್ದರಾಮಯ್ಯ ಮಾತನಾಡಿದರೆ ಬೊಮ್ಮಾಯಿ, ಯಡಿಯೂರಪ್ಪ ಉತ್ತರ ಕೊಡಲಿ. ಆಡಳಿತ ನಡೆಸುವುದು ಹೇಗೆ ಎಂದು ಸಿದ್ದರಾಮಯ್ಯ ಬಳಿ ಸಲಹೆ ಕೇಳಲಿ. ಹಿಜಾಬ್ ಬಗ್ಗೆ ಕಾಂಗ್ರೆಸ್ ನಿಲುವು ಎಂದೂ ಬದಲಾಗಿಲ್ಲ ಎಂದವರು ಇದೇ ವೇಳೆ ಸ್ಪಷ್ಟಪಡಿಸಿದರು.
ಕಾಪುವಿನಲ್ಲಿ ಬಿಜೆಪಿ ಮತ್ತು ಎಸ್ಡಿಪಿಐ ಒಟ್ಟಿಗೆ ಸ್ಪರ್ಧೆ ಮಾಡಿದೆ. ಜೊತೆಯಾಗಿ ನಾಮಪತ್ರ ಸಲ್ಲಿಸಿ, ಜೊತೆಯಾಗಿ ವಿಜಯೋತ್ಸವ ಮಾಡಿದ್ದಾರೆ. ಕಾಪುವಿನಲ್ಲಿ ಬಿಜೆಪಿ ಮತ್ತು ಎಸ್ಡಿಪಿಐಗೆ ಲವ್ ಆಯಿತು. ಉಡುಪಿಯಲ್ಲಿ ಇವರಿಬ್ಬರಿಗೆ ಕೂಸು ಹುಟ್ಟಿದೆ. ಹಿಜಾಬ್, ಬಿಜೆಪಿ ಮತ್ತು ಎಸ್ಡಿಪಿಐ ನ ಕೂಸು. ನಾನು ಹೊಡೆದ ಹಾಗೆ ಮಾಡುತ್ತೇನೆ ನೀನು ಕೂಗಿದ ಹಾಗೆ ಮಾಡು ಎಂಬಂತೆ ವರ್ತಿಸುತ್ತಿದ್ದಾರೆ. ಖಾದರ್ ಮುಸ್ಲಿಂ ಸಮುದಾಯದವರಾದರೂ ವಾಸ್ತವ ವಿಚಾರ ಹೇಳುವ ಮೂಲಕ ಸಮುದಾಯಕ್ಕೆ ತಿಳುವಳಿಕೆ ಕೊಟ್ಟಿದ್ದಾರೆ. ಸಿಎಂ ಬೊಮ್ಮಾಯಿಗೆ ಈ ರೀತಿ ಮಾತಾಡುವ ಧೈರ್ಯ ಇದೆಯಾ? ಎಂದು ಸೊರಕೆ ಪ್ರಶ್ನಿಸಿದರು.
ಕಾರ್ಕಳದಲ್ಲಿ ರಸ್ತೆಗೆ ಗೋಡ್ಸೆ ಹೆಸರು ವಿಚಾರಕ್ಕೆ ಪ್ರತಿಕ್ರಿಯಿಸಿದ ಸೊರಕೆ, ಕರಾವಳಿಯನ್ನು ಪ್ರಯೋಗಶಾಲೆ ಮಾಡಿದ್ದಾರೆ. ಗೋಡ್ಸೆಯ ಹೆಸರು ಕಾರ್ಕಳದ ಫಲಕದಲ್ಲಿ ಬರಲು ಏನು ಕಾರಣ? ಮಹಾತ್ಮ ಗಾಂಧೀಜಿ ಬಗ್ಗೆ ವಿಶ್ವಸಂಸ್ಥೆಯಲ್ಲಿ ಚರ್ಚೆಯಾಗುತ್ತದೆ. ಮಹಾತ್ಮ ಗಾಂಧೀಜಿಯವರ ಕುರುಹು ಇಲ್ಲದ ರಾಷ್ಟ್ರ ಪ್ರಪಂಚದಲ್ಲಿ ಇಲ್ಲ. ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದವರ ದಿನಾಚರಣೆ ಮಾಡುತ್ತಾರೆ , ದೇವಸ್ಥಾನ ಕಟ್ಟುತ್ತಾರೆ. ಫಲಕ ಮಾಡುತ್ತಾರೆ ಎಂದರೆ ಮನಸ್ಥಿತಿ ಏನಿದೆ ಅನ್ನೋದನ್ನು ಅರ್ಥೈಸಿಕೊಳ್ಳಿ ಎಂದು ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.